ಮಂಗಳೂರು(ದಕ್ಷಿಣ ಕನ್ನಡ): ನಗರದ ಸುರತ್ಕಲ್ ಬಳಿಯ ಕೃಷ್ಣಾಪುರದಲ್ಲಿ ಹತ್ಯೆಯಾದ ಜಲೀಲ್ ಎಂಬವರ ಮೃತದೇಹದ ಅಂತಿಮ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಕೃಷ್ಣಾಪುರದ 4ನೇ ಬ್ಲಾಕ್ನಲ್ಲಿರುವ ದಿನಸಿ ಅಂಗಡಿಯಲ್ಲೇ ಜಲೀಲ್ ಕಳೆದ ರಾತ್ರಿ ಕೊಲೆಯಾಗಿದ್ದರು.
ಚಾಕು ಇರಿತಕ್ಕೊಳಗಾದ ಜಲೀಲ್ ಅವರನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟರು. ಪೋಸ್ಟ್ ಮಾರ್ಟಂ ವ್ಯವಸ್ಥೆಗಾಗಿ ಮೃತದೇಹವನ್ನು ಎ.ಜೆ.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು. ಇಂದು ಬೆಳಿಗ್ಗೆ ಮೃತದೇಹವನ್ನು ಮನೆಗೆ ರವಾನಿಸಲಾಗಿತ್ತು. ಮನೆ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಅಂತಿಮ ದರ್ಶನದ ಬಳಿಕ ಪಂಜಿಮೊಗರಿನ ಮಸೀದಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಘಟನೆ ನಡೆದ ಕಾಟಿಪಳ್ಳದಲ್ಲಿ ಬಿಗುವಿನ ವಾತಾವರಣವಿದೆ. ಮುಂಜಾಗ್ರತಾ ಕ್ರಮವಾಗಿ ಸುರತ್ಕಲ್ ವ್ಯಾಪ್ತಿಯಲ್ಲಿ ಪೊಲೀಸ್ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಮುನ್ನೂರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ಕೆಎಸ್ ಆರ್ ಪಿ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಸುರತ್ಕಲ್, ಕಾಟಿಪಳ್ಳ, ಕೃಷ್ಣಾಪುರದ ಎಲ್ಲಾ ವ್ಯಾಪಾರ, ವ್ಯವಹಾರ ಸ್ಥಗಿತಗೊಂಡಿದ್ದು, ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಬಸ್ ಸಂಚಾರವೂ ಸ್ಥಗಿತವಾಗಿದೆ.
ಡಿಸಿ ಆಗಮಿಸುವಂತೆ ಪ್ರತಿಭಟನೆ: ಮೃತದೇಹವನ್ನು ಮೆರವಣಿಗೆ ಕೊಂಡೊಯ್ಯುವಾಗ ಸ್ಥಳಕ್ಕೆ ಡಿಸಿ ಆಗಮಿಸಬೇಕೆಂದು ಸ್ಥಳೀಯರು ಪಟ್ಟು ಹಿಡಿದರು. ಜಲೀಲ್ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆಂದು ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್ ತಡೆದ ಆಕ್ರೋಶಿತ ಗುಂಪು ಧರಣಿ ನಡೆಸಿತು. ಈವರೆಗೆ ಕೊಲೆ ಆರೋಪಿಗಳ ಬಂಧನವಾಗಿಲ್ಲ. ತಕ್ಷಣ ಆರೋಪಿಗಳನ್ನು ಬಂಧಿಸಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಜಿಲ್ಲಾಧಿಕಾರಿ ಬರುವವರೆಗೆ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಧರಣಿನಿರತರು ಪಟ್ಟು ಹಿಡಿದರು.
ಪರಿಣಾಮ, ಸ್ಥಳದಲ್ಲಿ ಕೆಲಹೊತ್ತು ಉದ್ವಿಗ್ನ ಪರಿಸ್ಥಿತಿ ಕಂಡುಬಂತು. ತಕ್ಷಣ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಮಧ್ಯಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನಪಡಿಸಿದರು. ಬಳಿಕ ಆಕ್ರೋಶಿತ ಗುಂಪು ಧರಣಿಯಿಂದ ಹಿಂದೆ ಸರಿಯಿತು.
ಇದನ್ನೂ ಓದಿ:ಸುರತ್ಕಲ್ನಲ್ಲಿ ಚೂರಿ ಇರಿತಕ್ಕೊಳಗಾದ ವ್ಯಕ್ತಿ ಚಿಕಿತ್ಸೆ ಫಲಿಸದೆ ಸಾವು
ನಿಷೇಧಾಜ್ಞೆ ಜಾರಿ:ಜಲೀಲ್ ಹತ್ಯೆಯ ಮುನ್ನೆಚ್ಚರಿಕೆ ಕ್ರಮವಾಗಿ ಸುರತ್ಕಲ್ ಸುತ್ತಮುತ್ತಲಿನ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಸುರತ್ಕಲ್, ಬಜಪೆ, ಕಾವೂರು ಮತ್ತು ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಆದೇಶಿಸಿದ್ದಾರೆ.