ಕರ್ನಾಟಕ

karnataka

ETV Bharat / state

ಕಡಬ: ಗುದ್ದಲಿ ಪೂಜೆಗೆ ಬಂದ ಸಚಿವ ಅಂಗಾರ ವಿರುದ್ಧ ಗ್ರಾಮಸ್ಥರ ಆಕ್ರೋಶ!

ಗುದ್ದಲಿ ಪೂಜೆಗೆ ಎಂದು ಆಗಮಿಸಿದ ಸಚಿವ ಅಂಗಾರ ವಿರುದ್ಧ ಕಡಬದ ಬಲ್ಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

angara
ಗುದ್ದಲಿ ಪೂಜೆ

By

Published : Jan 2, 2023, 2:35 PM IST

ಸಚಿವ ಅಂಗಾರ ಮತದಾರರ ಮಧ್ಯೆ ಅಭಿವೃದ್ಧಿಗಾಗಿ ಟಾಕ್​ಫೈಟ್​

ಕಡಬ(ದಕ್ಷಿಣ ಕನ್ನಡ): ಸಚಿವ ಎಸ್​ ಅಂಗಾರ ಕಡಬ ತಾಲೂಕಿನ ಬಲ್ಯ ಗ್ರಾಮಕ್ಕೆ ಗುದ್ದಲಿ ಪೂಜೆಗೆ ಆಗಮಿಸಿದ್ದು, ಸಚಿವರು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ಈಗಾಗಲೇ ಬಲ್ಯ ಗ್ರಾಮದ ಹಲವೆಡೆ ಮತದಾನ ಬಹಿಷ್ಕಾರ ಎಂಬ ಬ್ಯಾನರ್​ ಕೂಡಾ ಹಾಕಲಾಗಿದೆ.

ಸಚಿವ ಅಂಗಾರ ಬಲ್ಯದ ರಸ್ತೆ ಕಾಮಗಾರಿಯೊಂದಕ್ಕೆ ಆಗಮಿಸಿ ಗುದ್ದಲಿ ಪೂಜೆ ನೆರವೇರಿಸುವ ವೇಳೆ ಗ್ರಾಮಸ್ಥರು ನೀಡಿದ ಮನವಿಯನ್ನು ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ಈ ವೇಳೆ ಕೋಪಗೊಂಡ ಸ್ಥಳೀಯರು ಅಂಗಾರ ಮತ್ತು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಮತದಾನ ಬಹಿಷ್ಕಾರ ಬ್ಯಾನರ್​:ಬಲ್ಯ ಗ್ರಾಮದಲ್ಲಿ ಈಗಾಗಲೇ ಹಲವು ಕಾಮಗಾರಿಗಳ ಗುದ್ದಲಿ ಪೂಜೆ ನಡೆದರೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಎಂಬ ಆರೋಪವಿದೆ. ಇಲ್ಲಿನ ರಸ್ತೆಯೊಂದರ ಕಾಮಗಾರಿ ಆರಂಭಿಸುವಂತೆ ಖುದ್ದು ಮಾನ್ಯ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಆದೇಶ ಮಾಡಿ ಕಾಮಗಾರಿ ಆರಂಭಿಸುವಂತೆ ಸೂಚಿಸಲಾಗಿತ್ತು. ಆದರೂ ವಿವಿಧ ನೆಪವೊಡ್ಡಿ ಕಾಮಗಾರಿಗಳು ಆರಂಭವಾಗಿಲ್ಲ ಎನ್ನಲಾಗಿದೆ. ಇಂತಹ ಹಲವು ಘಟನೆಗಳಿಂದ ಕೋಪಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕಾರದ ಬ್ಯಾನರ್​ಗಳನ್ನು ಗ್ರಾಮದ ಕೆಲವು ಕಡೆಗಳಲ್ಲಿ ಅಳವಡಿಸಿದ್ದಾರೆ.

ಈ ನಡುವೆ ಬಲ್ಯ ಗ್ರಾಮದಲ್ಲಿ ಸುಮಾರು 85 ಲಕ್ಷ ರೂಪಾಯಿ ಅನುದಾನದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಸಚಿವರಾದ ಎಸ್.ಅಂಗಾರ ಅವರು ಗುದ್ದಲಿ ಪೂಜೆ ನೆರವೇರಿಸಿದ್ದರು. ಇದರಲ್ಲಿ ಬಲ್ಯ ಗ್ರಾಮದ ಗುತ್ತು - ಕಲ್ಲೇರಿ ರಸ್ತೆ ಕಾಂಕ್ರಿಟೀಕರಣ 20 ಲಕ್ಷ, ದೇವತ್ತಡ್ಕ - ಕರಂದಾಯ - ಬಾರಿಕೆ - ನಾಲ್ಗುತ್ತು ರಸ್ತೆ ಕಾಂಕ್ರಿಟೀಕರಣ 25 ಲಕ್ಷ ರೂ, ಹೊಸ್ಮಠ-ಬಲ್ಯ-ದೇರಾಜೆ-ಪನ್ಯಾಡಿ ರಸ್ತೆಗೆ 40 ಲಕ್ಷ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ನಾಟಕಯೊಂದರಲ್ಲಿ ಸಿದ್ದರಾಮಯ್ಯ ಡಿಕೆಶಿಗೆ ಅವಮಾನ: ದೂರು ದಾಖಲು..

ಈ ಕುರಿತಂತೆ ಗ್ರಾಮಸ್ಥರು ಈ ಹಿಂದಿನ ಕಾಮಗಾರಿಗಳ ವಿಳಂಬದ ಬಗ್ಗೆ ಗುದ್ದಲಿ ಪೂಜೆ ವೇಳೆ ಸಚಿವರನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದಾಗಿ ಸಚಿವರಿಗೆ ಮತ್ತು ಗ್ರಾಮಸ್ಥರಿಗೆ ಪರಸ್ಪರ ವಾಗ್ವಾದ ಉಂಟಾಗಿದೆ. "ಸರಕಾರ ಹಣ ಕೊಡುತ್ತಿಲ್ಲ. ನೀವು ಮನವಿ ಕೊಡಿ, ಬಿಡಿ. ನಾನು ಮಾಡುವ ಕೆಲಸ ಮಾಡ್ತೇನೆ. ನೀವು ಮನವಿ ಕೊಟ್ಟು 4 ವರ್ಷವಾಗಿದೆ ಅಂತ ಒಪ್ಪಿಕೊಳ್ಳುತ್ತೇನೆ. ಆದರೆ, ಕೋವಿಡ್ ಬಂದು ಸಮಸ್ಯೆಯಾಯ್ತು" ಎಂದು ಸಚಿವ ಎಸ್​. ಅಂಗಾರ ಸ್ಪಷ್ಟನೆ ನೀಡಿದ್ದಾರೆ. ಸಚಿವರ ಈ ರೀತಿಯ ಹೇಳಿಕೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಚರ್ಚೆಗಳ ನಡುವೆ ಬಿಜೆಪಿ ಮುಖಂಡರೊಬ್ಬರು "ನೀವು ಬಿಜೆಪಿಗೆ ಓಟು ನೀಡಿದ್ದೀರಿ ಎಂಬುದಕ್ಕೆ ಏನು ಗ್ಯಾರಂಟಿ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಗ್ರಾಮಸ್ಥರಾದ ಅಶ್ವತ್ಥ ಎಂಬವರು ಉತ್ತರಿಸಿದ್ದು, "ನಾನೇ 38 ವೋಟುಗಳನ್ನು ಸಚಿವ ಅಂಗಾರ ಅವರಿಗೆ ನೀಡಿದ್ದೇನೆ. ಅವರನ್ನು ಕೇಳುವ ಹಕ್ಕು ನಮಗೆ ಇದೆ" ಎಂದು ಹೇಳಿದರು.

ಇದರಿಂದ ಜನ ಕೋಪಗೊಂಡಿದ್ದು, 'ಗ್ರಾಮದ ದಾರಿದೀಪವನ್ನು ಪಂಚಾಯತ್ ದುರಸ್ತಿ ನೆಪದಲ್ಲಿ ಕಳಚಿ ಆರು ತಿಂಗಳು ಕಳೆದಿದೆ. ಅದನ್ನು ಇನ್ನೂ ಸರಿಪಡಿಸಿಲ್ಲ. ಹಲವು ವರ್ಷಗಳಿಂದ ನಾವು ಬಿಜೆಪಿಗೇ ಮತ ನೀಡುತ್ತಿದ್ದೇವೆ. ಮುಂದೆ ನೀವು ವೋಟು ಕೇಳಲು ಗ್ರಾಮಕ್ಕೆ ಬನ್ನಿ. ಆಗ ನೋಡಿಕೊಳ್ಳುತ್ತೇವೆ' ಎಂದು ಬಿಜೆಪಿ ಮುಖಂಡರಿಗೆ ಎಚ್ಚರಿಕೆ ನೀಡಿ ಅಲ್ಲಿಂದ ತೆರಳಿದರು.

ಇದನ್ನೂ ಓದಿ:ಶಿವಾಜಿನಗರ ಗೆದ್ರೆ, ನೂರಕ್ಕೆ ನೂರು ಬಿಜೆಪಿಗೇ ಮತ್ತೆ ಅಧಿಕಾರ: ಬೂತ್ ವಿಜಯ್ ಅಭಿಯಾನದಲ್ಲಿ ಸಿಎಂ

ABOUT THE AUTHOR

...view details