ಮಂಗಳೂರು:ಅಯೋಧ್ಯೆಯ ರಾಮಮಂದಿರದಲ್ಲಿ ಮಕರಸಂಕ್ರಾಂತಿ ಮುಗಿಯುತ್ತಿದ್ದಂತೆ ಉತ್ತರಾಯಣದ ಪರ್ವಕಾಲದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದರು. ಮಂದಿರ ನಿರ್ಮಾಣ ಸಮಿತಿಯ ಟ್ರಸ್ಟಿಗಳಾಗಿರುವ ಸ್ವಾಮೀಜಿ, ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಪ್ರಧಾನಿ ಮೋದಿ ಮಂದಿರದ ಉದ್ಘಾಟನೆ ಮಾಡಲಿದ್ದಾರೆ ಎಂದರು.
ರಾಮದೇವರ ಪ್ರತಿಷ್ಠಾಪನೆಯ ದಿನ ಎಲ್ಲರಿಗೂ ಅವಕಾಶ ಇರುವುದಿಲ್ಲ. ಹಾಗಾಗಿ ತಮ್ಮದೇ ಊರಿನ ದೇವಮಂದಿರಗಳಲ್ಲಿ ಅಳವಡಿಸಿರುವ ಬೃಹತ್ ಪರದೆಯಲ್ಲಿ ದೃಶ್ಯ ವೀಕ್ಷಣೆ ಮಾಡಬೇಕು. ಬಳಿಕ ಪೂಜೆ, ಭಜನೆ ಪ್ರಸಾದ ವಿತರಣೆ ಮಾಡಬೇಕು. ರಾತ್ರಿ ಹೊತ್ತು 5 ಶತಮಾನಗಳ ದ್ಯೋತಕವಾಗಿ ಐದು ದೀಪಗಳನ್ನು ಬೆಳಗಬೇಕು. ಜನವರಿ 23ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ರಾಮಮಂದಿರದಲ್ಲಿ ಮಂಡಲ ಉತ್ಸವ ನಡೆಯುತ್ತದೆ ಎಂದು ತಿಳಿಸಿದರು.
ರಾಮಮಂದಿರದಲ್ಲಿ ಯಾವುದೇ ಸೇವಾ ರೂಪದ ಪಟ್ಟಿ ಇರುವುದಿಲ್ಲ. ನಾವು ರಾಮಂದಿರ ಮಾತ್ರವಲ್ಲ, ರಾಮರಾಜ್ಯದ ಕನಸು ಕಂಡವರು. ಆದ್ದರಿಂದ ರಾಮಭಕ್ತಿ ಬೇರೆಯಲ್ಲ, ದೇಶ ಭಕ್ತಿ ಬೇರೆಯಲ್ಲ. ರಾಮ ಸೇವೆ ಮಾಡುವ ಇಚ್ಛೆಯುಳ್ಳವರು ಅಶಕ್ತರಿಗೆ ಸಹಾಯ ಮಾಡುವ ಮೂಲಕ, ತಾವು ಮಾಡುವ ಕೆಲಸದಲ್ಲಿಯೇ ಸೇವೆ ಮಾಡುವ ಮೂಲಕ ದೇಶಸೇವೆ ಮಾಡಬಹುದು. ಇದನ್ನೇ ರಾಮದೇವರ ಸೇವೆ ಎಂದು ಮಾಡಿ. ರಾಮಮಂದಿರಕ್ಕೆ ಬಂದಾಗ ಇದನ್ನೇ ಸೇವೆ ಎಂದು ರಾಮಾರ್ಪಣೆ ಮಾಡಿ ಎಂದು ಶ್ರೀಗಳು ಸಲಹೆ ನೀಡಿದರು.
ಹಿಂದೂ ಕಾರ್ಯಕರ್ತರ ಗಡಿಪಾರು ಒಪ್ಪುವಂಥದ್ದಲ್ಲ:ಹಿಂದೂ ಕಾರ್ಯಕರ್ತರ ಗಡಿಪಾರು ಒಪ್ಪುವಂಥ ಮಾತಲ್ಲ. ಇಂತಹ ಘಟನೆಗಳು ನಡೆಯಬಾರದು ಎಂದು ಸ್ವಾಮೀಜಿ ಹೇಳಿದ್ದಾರೆ. ಇಂಥ ವಿಚಾರಗಳು ನಡೆಯಲೇಬಾರದು. ಸರ್ಕಾರ ಎಲ್ಲರಿಗೂ ಸಂಬಂಧಪಟ್ಟದ್ದು. ಸರ್ಕಾರಕ್ಕೆ ಎಲ್ಲರೂ ಸಮಾನರು. ಒಂದು ಗುಂಪನ್ನು ಟಾರ್ಗೆಟ್ ಮಾಡಿದರೆ ಅದು ಶೋಭೆ ತರುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.