ಕರ್ನಾಟಕ

karnataka

ETV Bharat / state

ಮಾಣೂರು ಸುಬ್ರಹ್ಮಣ್ಯ ದೇಗುಲಕ್ಕೆ ಬರುವ ಭಕ್ತರಿಗೆ ಸಿಗುತ್ತೆ ಗರಿ ಬಿಚ್ಚಿದ ನವಿಲ ದರ್ಶನ

ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ಪ್ರತಿನಿತ್ಯ ನವಿಲಿನ ದರ್ಶನ ಸಿಗುತ್ತದೆ.

peacock in manooru Subramanya Temple
ಮಾಣೂರು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವಿಲು

By

Published : Jun 17, 2022, 5:57 PM IST

ಮಂಗಳೂರು(ದಕ್ಷಿಣ ಕನ್ನಡ):ನವಿಲು ಗರಿಬಿಚ್ಚಿ ಸಂಭ್ರಮಿಸುವ ದೃಶ್ಯ ಕಾಣಸಿಗುವುದು ಬಲು ಅಪರೂಪ. ಆದರೆ ಮಂಗಳೂರಿನ ನೀರುಮಾರ್ಗ ಬಳಿಯ ಮಾಣೂರು ಶ್ರೀ ಅನಂತಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಗರಿಬಿಚ್ಚಿದ ನವಿಲಿನ ದರ್ಶನ ಖಂಡಿತ ಸಿಗುತ್ತದೆ.

ಪುರಾಣದ ಪ್ರಕಾರ ಸುಬ್ರಹ್ಮಣ್ಯ ದೇವರ ವಾಹನ ನವಿಲು. ಸುಬ್ರಮಣ್ಯ ದೇವಸ್ಥಾನದಲ್ಲಿಯೇ ನವಿಲಿನ ದರ್ಶನ ಸಿಗುತ್ತಿರುವುದು ವಿಶೇಷ. ಈ ನವಿಲು ಇಡೀ ದಿನ ಈ ದೇವಸ್ಥಾನದ ಪರಿಸರದಲ್ಲಿಯೇ ಇರುತ್ತದೆ. ದೇವಸ್ಥಾನದಲ್ಲಿ ಪೂಜೆ ಆಗುವ ವೇಳೆ ದೇವಾಲಯದ ಸನಿಹ ಬಂದು ಕುಳಿತುಕೊಳ್ಳುತ್ತದೆ. ಒಮ್ಮೊಮ್ಮೆ ದೇವಸ್ಥಾನದೊಳಗೂ ಬರುವುದುಂಟು. ಸಂಜೆಯಾದಾಗ ದೇವಸ್ಥಾನದ ಅರ್ಚಕರ ಮನೆ ಬಳಿ ಕೂಡ ಹೋಗುತ್ತದೆ.


ಸಾಮಾನ್ಯವಾಗಿ ನವಿಲು ಮನುಷ್ಯರನ್ನು ಕಂಡರೆ ಗಾಬರಿಯಿಂದ ಓಡುತ್ತದೆ. ಆದರೆ ಈ ನವಿಲಿಗೆ ಮನುಷ್ಯರ ಸಹವಾಸ ಹೆಚ್ಚು. ದೇವಸ್ಥಾನಕ್ಕೆ ಭಕ್ತರು ಬಂದರೆ ಇದು ಹಾಜರಾಗುತ್ತದೆ. ಭಕ್ತರು ಬಂದು ಮೊಬೈಲ್ ಹಿಡಿದು ಪೊಟೋ ತೆಗೆಯುವ ವೇಳೆ ಗರಿಬಿಚ್ಚಿ ನರ್ತಿಸಿ ತನ್ನ ಸೌಂದರ್ಯ ಪ್ರದರ್ಶಿಸುತ್ತದೆ.

ಸ್ಥಳೀಯರೋರ್ವರು ಎಲ್ಲೋ ಸಿಕ್ಕಿದ್ದ ಮೂರು ಮೊಟ್ಟೆಯನ್ನು ಕೋಳಿ ಮೊಟ್ಟೆಯೊಂದಿಗೆ ಕಾವು ಕೊಡಲು ಇಟ್ಟಿದ್ದರು. ಆದರೆ ಮೊಟ್ಟೆಯಿಂದ ಮರಿ ಹೊರಬಂದಾಗ ಅದು ಕೋಳಿಯಲ್ಲ, ನವಿಲು ಎಂಬುದು ಗೊತ್ತಾಗಿ ಮರಿಯನ್ನು ದೇವಸ್ಥಾನಕ್ಕೆ ತಂದು ನೀಡಿದ್ದರು. ಈ ನವಿಲು‌ಮರಿಗಳು ದೇವಸ್ಥಾನದ ಪರಿಸರದಲ್ಲಿ ಬೆಳೆಯುತ್ತಿತ್ತು. ಆದರೆ ಯಾವುದೋ ಪ್ರಾಣಿಯ ದಾಳಿಗೆ ಎರಡು ನವಿಲು ಮರಿಗಳು ಸಾವನ್ನಪ್ಪಿದ್ದವು. ಉಳಿದ ಈ ಒಂದು ನವಿಲಿಗೆ ಮಯೂರ ಎಂದು ಹೆಸರಿಟ್ಟು ಕರೆಯಲಾಗುತ್ತಿದೆ. ಈ ನವಿಲಿಗೀಗ ಐದು ವರ್ಷವಾಗಿದೆ.

ಇದನ್ನೂ ಓದಿ:ನಾಳೆ ಬೆಳಗ್ಗೆ 11ಕ್ಕೆ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

ಮಯೂರ ನವಿಲು ಈ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಆಕರ್ಷಣೆಯ ಕೇಂದ್ರ ಬಿಂದು. ದೇವಸ್ಥಾನಕ್ಕೆ ಬರುವ ಭಕ್ತರು ನವಿಲನ್ನು ನೋಡಿಯೇ ಹೋಗುತ್ತಾರೆ. ಈ ನವಿಲು ಕೂಡ ಬರುವ ಭಕ್ತರಿಗೆ ಗರಿಬಿಚ್ಚಿ ತನ್ನ ನರ್ತನದ ಮೂಲಕ ಕಣ್ಮನ ತಣಿಸುತ್ತಿದೆ.

ABOUT THE AUTHOR

...view details