ಕರ್ನಾಟಕ

karnataka

By

Published : Aug 10, 2023, 8:05 PM IST

ETV Bharat / state

ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪೇ ಸಿಎಂ, ಪೇ ಡಿಸಿಎಂ ಅಭಿಯಾನ: ಕೋಟ ಶ್ರೀನಿವಾಸ ಪೂಜಾರಿ

''ರಾಜ್ಯ ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಪೇ ಸಿಎಂ, ಪೇ ಡಿಸಿಎಂ ಅಭಿಯಾನ ಕೈಗೊಳ್ಳಬೇಕಾಗಿದೆ'' ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Former Minister Kota Srinivasa Pujari
ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತು

ಮಂಗಳೂರು:''ಅಧಿಕಾರಕ್ಕೇರಿದ ಮೂರೇ ತಿಂಗಳಲ್ಲಿ ಸರ್ಕಾರವೊಂದರ ವಿರುದ್ಧ ಭ್ರಷ್ಟಾಚಾರ ಆರೋಪಿ ಕೇಳಿಬಂದಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು. ಇವರ ಭ್ರಷ್ಟಾಚಾರದ ವಿರುದ್ದ ಪೇ ಸಿಎಂ, ಪೇ ಡಿಸಿಎಂ ಅಭಿಯಾನ ಮಾಡುವಂತಾಗಿದೆ'' ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ವರ್ಗಾವಣೆ ದಂಧೆ ಎಲ್ಲಿವರೆಗೆ ನಡೆಯುತ್ತಿದೆ ಎಂದರೆ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸರ್ ನಮಗೆ ವರ್ಗಾವಣೆಯೇ ಬೇಡ. ಆದರೆ, ನಮ್ಮ ಈಗಿರುವ ಸ್ಥಾನದಲ್ಲಿ ಮುಂದುವರಿಯಲು ಲಕ್ಷಾಂತರ ರೂ. ಹಣ ಕೊಡಬೇಕಿದೆ ಎನ್ನುತ್ತಿದ್ದಾರೆ. ಬಿಬಿಎಂಪಿಯಲ್ಲಿ ಕಮಿಷನ್ ಕೇಳುತ್ತಾರೆ ಎಂದು ಗುತ್ತಿಗೆದಾರರ ಸಂಘ ರಾಜಾರೋಷವಾಗಿ ಹೇಳುತ್ತಿ‌ದೆ'' ಎಂದರು.

''ಎಲ್ಲ ಇಲಾಖೆಗಳಲ್ಲೂ ಸರ್ಕಾರಿ ಹುದ್ದೆಗಳನ್ನು ಹರಾಜಿಗಿಡಲಾಗಿದೆ. ಮೂರೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲಾಗಿದೆ. ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಮುಂದುವರೆಯಲಿದೆ. ಸರ್ಕಾರ ತಪ್ಪು ಮಾಡಿದಾಗ ಆರಂಭದಲ್ಲಿ ಹೇಳಿದ್ದೇವೆ. ಮತ್ತೆ ಪ್ರತಿಭಟನೆ ಮಾಡುತ್ತೇವೆ. ಕೊನೆಗೆ ರಾಜೀನಾಮೆ ಕೇಳುತ್ತೇವೆ. ಸಿಎಂ ಮತ್ತು ಡಿಸಿಎಂ ಇದಕ್ಕೆ ಉತ್ತರ ನೀಡಬೇಕು. ಇಲ್ಲದಿದ್ದರೆ ತಪ್ಪೊಪ್ಪಿಕೊಳ್ಳಬೇಕು'' ಎಂದು ಹೇಳಿದರು.

ದ.ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಆರೋಪ- ಆಕ್ರೋಶ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಶಾಸಕರ ಹಕ್ಕುಚ್ಯುತಿ ಮಾಡಲಾಗುತ್ತಿದೆ ಎಂದು ಆರೋಪಿಸಿ ದ.ಕ ಜಿಲ್ಲಾಡಳಿತದ ವಿರುದ್ದ ಧರಣಿಗೆ ಬಿಜೆಪಿ ಶಾಸಕರ ನಿರ್ಧಾರ ಮಾಡಲಾಗಿದೆ ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.

ಮಂಗಳೂರಿನಲ್ಲಿ ದಕ್ಷಿಣ ಕನ್ನಡದ ಬಿಜೆಪಿ ಶಾಸಕರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಕರಾವಳಿ ಜಿಲ್ಲೆಗಳ ಇತಿಹಾಸದಲ್ಲೇ ಇಂಥ ಘಟನೆ ನಡೆದಿಲ್ಲ. ಪ್ರಜಾಪ್ರಭುತ್ವದಲ್ಲಿ ಶಾಸಕರಿಗೆ ಸಂವಿಧಾನಬದ್ಧ ಕೆಲಸ ಮಾಡುವ ಹಕ್ಕಿದೆ. ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಬಂದಾಗಲೂ ಅವರಿಗೆ ಮಾಹಿತಿ ಕೊಡಲಾಗಿದೆ. ಡಿಸಿ ಕಚೇರಿ ಪ್ರೋಟೋಕಾಲ್ ಪ್ರಕಾರವೇ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ. ಹೀಗಿದ್ದರೂ ಜಿಲ್ಲೆಯ ಅಧಿಕಾರಿಗಳಿಂದ ಹಕ್ಕು ಚ್ಯುತಿ ಮಾಡಲಾಗುತ್ತಿದೆ'' ಎಂದರು.

''ಸಿಎಂ ಬಂದಾಗ ಅಧಿಕಾರಿಗಳಿಗೆ ಸೂಚನೆ ಕೊಟ್ಟರೂ ಕ್ಯಾರೇ ಅಂತಿಲ್ಲ. ಸರ್ಕಾರಿ ಅಧಿಕಾರಿಗಳು ಕೆಲಸ ಮಾಡಲು ಭಯಪಡುತ್ತಾ ಇದ್ದಾರೆ. ಜಿಲ್ಲೆಯಲ್ಲಿ ಆಡಳಿತದ ಅಜಾಗರೂಕತೆ ತಾಂಡವವಾಡ್ತಿದೆ. ಶಾಸಕರ ಹಕ್ಕು ರಕ್ಷಣೆ ಮಾಡಲು ನಮಗೆ ಬೇರೆ ದಾರಿಯಿಲ್ಲ. ನಾವು ಮುಂದಿನ ಮೂರು ದಿನ ಸಿಎಂ ಹಾಗೂ ಪ್ರಿಯಾಂಕ್ ಖರ್ಗೆಯವರಿಗೆ ಗಡುವು ಕೊಡ್ತೇವೆ. ಆ.14ರ ಒಳಗೆ ಭರವಸೆ ಸಿಗದೇ ಇದ್ದರೆ ಡಿಸಿ ಕಚೇರಿ ಎದುರು ಧರಣಿ ಮಾಡುತ್ತೇವೆ. ಪಿಡಿಒ ಮತ್ತು ಇಒ ಅಮಾನತ್ ವಾಪಾಸ್ ಪಡೆಯಬೇಕು. ನಮ್ಮ ಶಾಸಕರಿಗೆ ಕೆಲಸ ಮಾಡಲು ಬಿಡಬೇಕು. ಇಲ್ಲದಿದ್ದರೆ, ಆ.14ರಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮಾಡುತ್ತೇವೆ'' ಎಂದರು.

ಮೂಡಬಿದ್ರೆ ಬಿಜೆಪಿ ಶಾಸಕ ಉಮಾನಾಥ್ ಕೋಟ್ಯಾನ್ ಮಾತನಾಡಿ, ''ದ.ಕ ಜಿಲ್ಲಾಡಳಿತ ಆಡಳಿತ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ಮಾಡ್ತಾ ಇದೆ. ರಾಜ್ಯದಲ್ಲಿ ನೂತನ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಕ್ಕು ಚ್ಯುತಿ ಆಗಿದೆ. ಜುಲೈ 31ರಂದು ಮೂಡಬಿದಿರೆಯ ಇರುವೈಲ್ ಗ್ರಾ.ಪಂ ಕಟ್ಟಡ ಉದ್ಘಾಟನೆ ಇತ್ತು. ಇದಕ್ಕೆ ಡಿಸಿ ಕಚೇರಿ ಪ್ರೊಟೋಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಅಚ್ಚಾಗಿತ್ತು. ಉದ್ಘಾಟನೆಗೆ ಎರಡು ದಿನ ಇರುವಾಗ ಕಾರ್ಯಕ್ರಮ ರದ್ದತಿಗೆ ಸೂಚನೆ ಬಂದಿದೆ. ಅಲ್ಲದೇ ಸಂಜೆ ಹೊತ್ತಿಗೆ ಮೂಡಬಿದಿರೆ ಇಓ ದಯಾವತಿ ಮತ್ತು ಪಿಡಿಓ ಕಾಂತಪ್ಪ ಅಮಾನತ್​ ಮಾಡಲಾಗಿದೆ. ಹೀಗಾಗಿ ಸುದ್ದಿಗೋಷ್ಟಿ ಮಾಡಿ ಅಮಾನತು ರದ್ದು ಮಾಡಲು ಆಗ್ರಹಿಸಿದ್ದೆ'' ಎಂದರು.

ಬಂಟ್ವಾಳ ಬಿಜೆಪಿ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ''ನನ್ನ ಕ್ಷೇತ್ರದಲ್ಲೂ ಇದೇ ರೀತಿ ಹಕ್ಕು ಚ್ಯುತಿಯ ಕೆಲಸ ಆಗಿದೆ. ಸಿಎಂ ಸೂಚನೆ ಕೊಟ್ಟ ಬಳಿಕವೂ ಬಂಟ್ವಾಳದಲ್ಲಿ ಘಟನೆ ಆಗಿದೆ. ಆ.4ರಂದು ಇರ್ವತ್ತೂರು ಗ್ರಾಪಂ ಸ್ವಚ್ಛ ಸಂಕೀರ್ಣ ಘಟಕ ಉದ್ಘಾಟನೆ ಇತ್ತು. ಶಿಷ್ಟಾಚಾರ ಪ್ರಕಾರ ಅದರ ಆಮಂತ್ರಣ ಪತ್ರಿಕೆ ಮುದ್ರಣ ಆಗಿತ್ತು. ಆದರೆ, ಆ.3ರಂದು ಪಿಡಿಓ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಆದರೆ, ಸ್ಥಳೀಯ ಶಾಸಕನಾದ ನನ್ನ ಗಮನಕ್ಕೂ ತಂದಿಲ್ಲ. ಎಂಎಲ್​ಸಿ ಹೆಸರು ಮೇಲೆ ಕೆಳಗೆ ಆಗಿದೆ ಅಂತ ಕಾರ್ಯಕ್ರಮ ರದ್ದು ಮಾಡಿದ್ದಾರಂತೆ. ಅಧಿಕಾರಿಗಳನ್ನು ‌ಹೆದರಿಸಿ ಕೆಲಸ ಮಾಡಿಸಲಾಗ್ತಿದೆ. ಮೇಲಾಧಿಕಾರಿಗಳ ಮೌಖಿಕ ಆದೇಶದಂತೆ ಕೆಲಸ ಆಗ್ತಿದೆ'' ಎಂದರು.

ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ''ಮಂಗಳೂರಿನ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಇದರಲ್ಲಿ ಕಾಂಗ್ರೆಸ್​ನ ಮಾಜಿ ಶಾಸಕರು, ಮಹಿಳಾ ಘಟಕದ ಅಧ್ಯಕ್ಷರು ಇದ್ದರು. ಹಾಗಾದ್ರೆ ಇದು ಪ್ರೊಟೋಕಾಲ್ ಉಲ್ಲಂಘನೆ ಅನ್ನಲ್ವಾ? ನಾನು ಆ ಕಾರ್ಯಕ್ರಮಕ್ಕೆ ಬಂದಿಲ್ಲ ಅಂತ ಮಾಜಿ ಶಾಸಕರನ್ನ ಕೂರಿಸಿದ್ರು ಅಂತ ಗುಂಡೂರಾವ್ ಹೇಳಿದ್ರು. ಹಾಗಾದ್ರೆ ಉಸ್ತುವಾರಿ ಸಚಿವರು ಬಂದಿಲ್ಲ ಅಂತ ನಾವು ಮಾಜಿ ಉಸ್ತುವಾರಿ ಸಚಿವರನ್ನ ಕೂರಿಸಿ ಕಾರ್ಯಕ್ರಮ ಮಾಡೋಕೆ ಆಗುತ್ತದೆಯಾ ಹಾಗೂ ಎರಡೂ ಕಡೆಗಳಲ್ಲಿ ಕಾರ್ಯಕ್ರಮ ನಿಲ್ಲಿಸಲು ಪ್ರಿಯಾಂಕ್ ಖರ್ಗೆಯವರಿಗೆ ತಿಳಿಸಿದವರು ಯಾರು ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಕೇಂದ್ರದ ಕಾಂಗ್ರೆಸ್​ಗೆ ರಾಜ್ಯ ಸರ್ಕಾರ ಎಟಿಎಂ, ಲೋಕಸಭೆ ಚುನಾವಣೆಗೆ ಹಣ ಸಂಗ್ರಹ: ಬಿ.ವೈ.ವಿಜಯೇಂದ್ರ

ABOUT THE AUTHOR

...view details