ಕಡಬ (ದಕ್ಷಿಣ ಕನ್ನಡ): ಪಾರ್ಕಿಂಗ್ಗಳಾದ ಫುಟ್ಪಾತ್ ರಸ್ತೆಗಳು. ರಸ್ತೆ ನಡುವೆಯೇ ವಾಹನಗಳ ನಿಲುಗಡೆ. ರಸ್ತೆಯಲ್ಲಿ ಸಂಚರಿಸುತ್ತಿರುವ ಜನ. ಇದು ಕಡಬ ನಗರದ ಪ್ರಸ್ತುತ ಪರಿಸ್ಥಿತಿ.
ಕಡಬದಲ್ಲಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಫುಟ್ಪಾತ್ ಸೇರಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದ್ದು, ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನಗರದ ಅಂದವೂ ಹಾಳಾಗುತ್ತಿದೆ.
ರಸ್ತೆಯಲ್ಲೇ ವಾಹನಗಳ ನಿಲುಗಡೆ ಎಲ್ಲಿಯೂ ನೋ ಪಾರ್ಕಿಂಗ್ ಫಲಕ ಅಳವಡಿಸಿಲ್ಲ. ಹೀಗಾಗಿ, ದ್ವಿಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳನ್ನು ರಸ್ತೆಗೆ ಹೊಂದಿಕೊಂಡಂತೆ ರಾಜಾರೋಷವಾಗಿ ನಿಲ್ಲಿಸಲಾಗುತ್ತಿದೆ.
ಪೊಲೀಸರು ಬಂದಲ್ಲಿ ಸವಾರರು ಬೇರೆ ಕಡೆ ನಿಲ್ಲಿಸುತ್ತಾರೆ. ಪೊಲೀಸರು ಹೋದ ನಂತರ ಮತ್ತದೆ ಪರಿಸ್ಥಿತಿ. ಸಂಬಂಧಪಟ್ಟ ಇಲಾಖೆ ಗಮನ ಹರಿಸಿ ರಸ್ತೆಯಲ್ಲಿ ವಾಹನಗಳ ನಿಲುಗಡೆ ಆಗದಂತೆ ಮುತುವರ್ಜಿ ವಹಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.