ಬೆಳ್ತಂಗಡಿ (ದಕ್ಷಿಣಕನ್ನಡ): ತಾಲೂಕಿನ ಎಳನೀರು ಸಮೀಪದ ಬಂಗಾರ್ ಪಲ್ಕೆ ಜಲಪಾತಕ್ಕೆ ತೆರಳಿದ್ದ ವೇಳೆ ಗುಡ್ಡ ಕುಸಿತಗೊಂಡು ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಕುರಹು ಇನ್ನೂ ಪತ್ತೆಯಾಗದ ಕಾರಣ ಶೋಧ ಕಾರ್ಯ ಮುಂದುವರೆದಿದೆ.
ಈಗಾಗಲೇ ಎಸ್ಡಿಆರ್ಎಫ್ ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಸ್ಥಳೀಯರು ಹಾಗೂ ಇನ್ನಿತರ ಸಂಘಟನೆಗಳ ಕಾರ್ಯಕರ್ತರು ಶೋಧ ಕಾರ್ಯಚರಣೆಯಲ್ಲಿ ನಿರತರಾಗಿದ್ದಾರೆ. ದಟ್ಟ ಕಾಡಿನ ನಡುವೆ ಇರುವ ಈ ಸ್ಥಳಕ್ಕೆ ಯಾವುದೇ ವಾಹನವಾಗಲಿ, ಯಂತ್ರಗಳನ್ನಾಗಲಿ ಸಾಗಿಸಲು ಸಾಧ್ಯವಾಗುತ್ತಿಲ್ಲ. ಜೊತೆಗೆ ದೊಡ್ಡ - ದೊಡ್ಡ ಬಂಡೆಗಳು ಕುಸಿದು ಬಿದ್ದಿರುವುದರಿಂದ ಕಾರ್ಯಾಚರಣೆಗೆ ಇನ್ನಷ್ಟು ತೊಡಕಾಗಿದೆ.
ಗುಡ್ಡ ಕುಸಿತದ ಅಪಾಯ ಹೆಚ್ಚಿರುವುದರಿಂದ ತುಂಬಾ ಎಚ್ಚರಿಕೆಯಿಂದ ಶೋಧ ಕಾರ್ಯ ಮುಂದುವರಿಯುತ್ತಿದೆ. ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ನಂದ ಕುಮಾರ್ ಸ್ಥಳದಲ್ಲಿದ್ದು, ಕಾರ್ಯಾಚರಣೆಗಳ ಬಗ್ಗೆ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಶಾಸಕ ಹರೀಶ್ ಪೂಂಜಾ ಕೂಡ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದಾರೆ. ಜೊತೆಗೆ ಯುವಕನ ಮನೆಗೆ ತೆರಳಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ.