ಕರ್ನಾಟಕ

karnataka

ETV Bharat / state

ಶತಮಾನದ ಹಿಂದಿನ 'ಪಲಾಂಡು ಚರಿತ್ರೆ' ಯಕ್ಷಗಾನ ಪ್ರಥಮ ಪ್ರಯೋಗ: ಯೂಟ್ಯೂಬ್​ನಲ್ಲಿ ರಿಲೀಸ್​ - ಮಂಗಳೂರು

ನೂರು ವರ್ಷಗಳ ಹಿಂದೆ ಬದುಕಿದ್ದ ಕೀರ್ತಿಶೇಷ ಕೆರೋಡಿ ಸುಬ್ಬರಾಯ ವಿರಚಿತ 'ಪಲಾಂಡು ಚರಿತ್ರೆ' ಪ್ರಸಂಗದಲ್ಲಿ ಭೂಮಿಯ ಮೇಲೆ ಬೆಳೆಯುವ ತರಕಾರಿ ಹಾಗೂ ಭೂಮಿಯ ಅಡಿಭಾಗದಲ್ಲಿ ಬೆಳೆಯುವ ಗೆಡ್ಡೆ-ಗೆಣಸುಗಳಲ್ಲಿ ಯಾವುದು ಶ್ರೇಷ್ಠ? ಎಂಬುದೇ ಮೂಲಭಾಗವಾಗಿದೆ.

Palandu Charithre
ಪಲಾಂಡು ಚರಿತ್ರೆ

By

Published : Aug 20, 2020, 7:40 PM IST

ಮಂಗಳೂರು: ಕೊರೊನಾ ಭೀತಿಯಿಂದ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಕ್ಕೂ ನಿರ್ಬಂಧ ಇರುವ ಈ ಕಾಲದಲ್ಲಿ ಯೂಟ್ಯೂಬ್​ನಲ್ಲಿ ಯಕ್ಷಗಾನ ಪ್ರಸಂಗಗಳನ್ನು ಅಪ್ಲೋಡ್ ಮಾಡುವ ಮೂಲಕ ಯಕ್ಷರಸಿಕರ ಮನತಣಿಸುವ ಕೆಲಸವನ್ನು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ ಮಾಡುತ್ತಿದೆ‌.

ಈ ಹಿಂದೆ ಕೊರೊನಾ ಯಕ್ಷ ಜಾಗೃತಿ ಪ್ರಸಂಗವನ್ನು ಜಿಲ್ಲೆಯ ಪ್ರಸಿದ್ಧ ಕಲಾವಿದರು ಹಾಗೂ ಬೊಂಬೆಯಾಟದ ಮೂಲಕ ಆಯೋಜಿಸಿದ್ದ ಪ್ರತಿಷ್ಠಾನ ಇದೀಗ ಗೆಡ್ಡೆಗೆಣಸು (ಕಂದಮೂಲ)ಗಳ ಮಹತ್ವವನ್ನು ಸಾರುವ ಶತಮಾನಗಳ ಹಿಂದಿನ ಯಕ್ಷಗಾನ 'ಪಲಾಂಡು ಚರಿತ್ರೆ'ಯನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದೆ.

ಪ್ರಥಮ ಪ್ರಯೋಗವಾದ 'ಪಲಾಂಡು ಚರಿತ್ರೆ' ಯಕ್ಷಗಾನ

ನೂರು ವರ್ಷಗಳ ಹಿಂದೆ ಬದುಕಿದ್ದ ಕೀರ್ತಿಶೇಷ ಕೆರೋಡಿ ಸುಬ್ಬರಾಯ ವಿರಚಿತ 'ಪಲಾಂಡು ಚರಿತ್ರೆ' ಪ್ರಸಂಗದಲ್ಲಿ ಭೂಮಿಯ ಮೇಲೆ ಬೆಳೆಯುವ ತರಕಾರಿ ಹಾಗೂ ಭೂಮಿಯ ಅಡಿಭಾಗದಲ್ಲಿ ಬೆಳೆಯುವ ಗೆಡ್ಡೆ-ಗೆಣಸುಗಳಲ್ಲಿ ಯಾವುದು ಶ್ರೇಷ್ಠ? ಎಂಬುದೇ ಮೂಲಭಾಗವಾಗಿದೆ. ಪಲಾಂಡು(ಈರುಳ್ಳಿ)ವನ್ನು ಮುಖ್ಯ ಭೂಮಿಕೆಯಾಗಿರಿಸಿ, ಗೆಡ್ಡೆಗೆಣಸುಗಳ ಮಹತ್ವ ಸಾರುವ ಈ ಪ್ರಸಂಗವನ್ನು ಶತಮಾನದ ಹಿಂದೆ ರಚಿಸಲಾಗಿದ್ದರೂ, ಈವರೆಗೆ ಪ್ರಯೋಗ ಕಂಡಿರಲಿಲ್ಲ. ಇದೀಗ ಇದರ ಪ್ರಥಮ ಪ್ರಯೋಗವು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಮೂಲಕ ಆಗುತ್ತಿದೆ.

ಒಂದು ಬಾರಿ ಗೆಡ್ಡೆ-ಗೆಣಸುಗಳಿಗೂ, ಶಾಖಾಹಾರಿಗಳಿಗೂ ತಮ್ಮಲ್ಲಿ ಯಾರು ಶ್ರೇಷ್ಠರೆಂಬ ಕುರಿತು ಉಂಟಾದ ವಾದ-ವಿವಾದ ಇತ್ಯರ್ಥವಾಗದೆ ಕೊನೆಗೆ ಸೂಕ್ತ ತೀರ್ಮಾನಕ್ಕೆ ಭಗವಂತ ಶ್ರೀಕೃಷ್ಣನಿಗೆ ಮೊರೆ ಹೋಗಲಾಗುತ್ತದೆ. ಯಾರು ಶ್ರೇಷ್ಠ ಎಂಬುದನ್ನು ತಿಳಿಯಲು ಎರಡೂ ಕಡೆಯವರಿಗೂ ಮೂರು ದಿನಗಳ ಕಾಲಾವಕಾಶ ನೀಡಿದಾಗ, ತರಕಾರಿಗಳು ಬಾಡಿದರೆ, ಗೆಡ್ಡೆ-ಗೆಣಸುಗಳು ಚಿಗುರಲು ಆರಂಭಿಸಿದ್ದವು. ಆದ್ದರಿಂದ ಅಭಿವೃದ್ಧಿ ಪಥದಲ್ಲಿದ್ದ ಕಂದಮೂಲಗಳು ಶ್ರೇಷ್ಠವೆಂದು ಸಾರಲಾಗುತ್ತದೆ. ಈ ಪ್ರಸಂಗದ ಮೂಲಕ ಯಾವ ಆಹಾರವನ್ನು ಯಾವಾಗ ಸೇವಿಸಬೇಕು?. ಯಾವ ಆಹಾರದಲ್ಲಿ ಯಾವ ಪೌಷ್ಟಿಕಾಂಶಗಳಿವೆ?. ಇವುಗಳ ಅಗತ್ಯವೇನು ಎಂಬುದರ ಮಹತ್ವವನ್ನು ಬಹಳ ಸೊಗಸಾಗಿ ತಿಳಿಸಲಾಗಿದೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಅವರ ಮುತುವರ್ಜಿಯಿಂದ ಈ ಪ್ರಸಂಗವು ಪ್ರಯೋಗ ಕಂಡಿದ್ದು, ಕನ್ನಡ ನಾಟ್ಯರಂಗ ಹೈದರಾಬಾದ್ ಈ ಪ್ರಸಂಗಕ್ಕೆ ಪ್ರಾಯೋಜಕತ್ವ ನೀಡಿದೆ. ಸುಮಾರು 2 ಗಂಟೆ 11 ನಿಮಿಷಗಳ ಕಾಲದ ಈ ಪ್ರಸಂಗವನ್ನು ಕೇವಲ ಒಂದು ದಿನದಲ್ಲಿ 1,710 ಮಂದಿ ವೀಕ್ಷಣೆ ಮಾಡಿದ್ದಾರೆ.

ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸಿರಿಬಾಗಿಲು ಈ ಬಗ್ಗೆ ಪ್ರತಿಕ್ರಿಯಿಸಿ, 'ಯಕ್ಷಗಾನ ಕಲೆಯನ್ನು ಸರ್ವಸ್ವವಾಗಿರಿಸುವ ಕಲಾವಿದರಾದ ನಾವು, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಕಲೆಯ ಮೂಲಕವೇ ಏನಾದರೂ ಸಂದೇಶ ಕೊಡಬೇಕೆಂಬ ಉದ್ದೇಶ ಹೊಂದಿದ್ದೇವೆ. ಈ ಹಿಂದೆ ಕೋವಿಡ್-19 ರ ಬಗ್ಗೆ ಹಲವಾರು ಜಾಗೃತಿ ಯಕ್ಷಗಾನ, ಬೊಂಬೆಯಾಟ ನಡೆಸಿ ಜಾಗತಿಕ ಮಟ್ಟದಲ್ಲಿ ಜಾಗೃತಿ ಅಭಿಯಾನ ನಡೆಸಿದ್ದೆವು. ಇದೀಗ ನೂರು ವರ್ಷಗಳ ಹಿಂದೆ ಕೆರೊಡಿ ಸುಬ್ಬರಾವ್ ರಚಿಸಿದ ಪಲಾಂಡು ಚರಿತ್ರೆ ಪ್ರಸಂಗದ ವಿಶೇಷತೆಯನ್ನು ಗಮನಿಸಿ, ಇಂದಿನ ಈ ಪರಿಸ್ಥಿತಿಗೆ ಹೊಂದುವಂತೆ ದಾಖಲಿಸಿ, ದೃಶ್ಯ ಮಾಧ್ಯಮದ ಮೂಲಕ ಪ್ರಸಾರ ಮಾಡುತ್ತಿದ್ದೇವೆ. ಯಕ್ಷಗಾನ ಕಲಾಪ್ರೇಮಿಗಳು ಇದನ್ನು ಆಸ್ವಾದಿಸಿ, ಯಕ್ಷಗಾನ ಕಲೆ ಬೆಳೆದು ಬರಲಿ ಎನ್ನುವುದು ನಮ್ಮ ಆಶಯ' ಎಂದು ಹೇಳಿದರು.

ABOUT THE AUTHOR

...view details