ಮಂಗಳೂರು:ಕಿತ್ತಳೆ ಹಣ್ಣು ಮಾರಿ ಹರೇಕಳದಲ್ಲಿ ಶಾಲೆ ಕಟ್ಟಿಸಿ ಸಾವಿರಾರು ಮಕ್ಕಳಿಗೆ ಶಿಕ್ಷಣಕ್ಕೆ ನೆರವಾದ 'ಅಕ್ಷರ ಸಂತ' ಹರೇಕಳ ಹಾಜಬ್ಬ ಅವರು ರಾಷ್ಟ್ರಪತಿಯಿಂದ ಪದ್ಮಶ್ರೀ ಪಡೆದು ನಾಡಿಗೆ ಕೀರ್ತಿ ತಂದಿದ್ದಾರೆ. ಇಂದು ದೆಹಲಿಯಿಂದ ಮಂಗಳೂರಿಗೆ ಅವರು ವಿಮಾನದ ಮೂಲಕ ಆಗಮಿಸಿದ್ದು, ವಿಮಾನ ನಿಲ್ದಾಣದಲ್ಲಿ ಅವರಿಗೆ ಸ್ವಾಗತ ಕೋರಲಾಗಿದೆ.
ಸಾಧಕ ಹಾಜಬ್ಬ ಅವರನ್ನು ಸ್ವಾಗತಿಸಲೆಂದೇ ನೂರಾರು ಮಂದಿ ವಿಮಾನ ನಿಲ್ದಾಣದ ಬಳಿ ನೆರೆದಿದ್ದರು. ಹಾಜಬ್ಬ ಬರುತ್ತಿದ್ದಂತೆ ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಈ ವೇಳೆ ನೂರಾರು ಮಂದಿ ಏಕಕಾಲಕ್ಕೆ ಬಂದಿದ್ದನ್ನು ಕಂಡು ಹಾಜಬ್ಬ ಒಂದು ಕ್ಷಣ ಗಲಿಬಿಲಿಗೊಂಡರು.
ಹಾಜಬ್ಬರಿಗೆ ಶುಭಕೋರಲು ಸ್ಥಳದಲ್ಲಿ ನೂಕುನುಗ್ಗಲು ಸಹ ಏರ್ಪಟ್ಟಿತು. ಒಂದಿಬ್ಬರಿಂದ ಹೂಗುಚ್ಛ ಸ್ವೀಕರಿಸಿದ ಅವರು ಬಳಿಕ ತಹಶೀಲ್ದಾರ್ ಗುರುಪ್ರಸಾದ್ ಅವರೊಂದಿಗೆ ಕಾರಿನಲ್ಲಿ ತೆರಳಿದರು.
2020 ಸಾಲಿನಲ್ಲಿ ಘೋಷಿಸಲಾಗಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಕೋವಿಡ್ ಬಿಕ್ಕಟ್ಟಿನಿಂದ ಹಾಜಬ್ಬ ಅವರಿಗೆ ವಿತರಿಸಿರಲಿಲ್ಲ. ನಿನ್ನೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಜಬ್ಬ ಅವರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಅವರ ಸರಳತೆ ಇಡೀ ದೇಶದ ಜನರ ಗಮನ ಸೆಳೆಯಿತು.
ಇದನ್ನೂ ಓದಿ:ಯಾರನ್ನೂ ಓಲೈಕೆ ಮಾಡದೇ ಎಲ್ಲರನ್ನೂ ಸಮಾನವಾಗಿ ಕಾಣಬೇಕಿದೆ: ಪೇಜಾವರ ಶ್ರೀ