ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಸರ್ಕಾರಿ ಶಾಲೆಯ ಮೈದಾನದಲ್ಲಿ ನಳನಳಿಸುವ ಭತ್ತದ ಪೈರುಗಳು ತುಂಬಲಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಪೋಷಕರಿಂದ ಹೊಸ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಲಾಕ್ಡೌನ್ನಿಂದಾಗಿ ಶಾಲೆಗೆ ಮಕ್ಕಳು ಬರುವುದು ನಿಂತ ಕಾರಣ, ಮಕ್ಕಳ ಪೋಷಕರು ಶಾಲಾ ಮೈದಾನದಲ್ಲಿ ಭತ್ತದ ಕೃಷಿ ಮಾಡಲು ಹೊರಟಿದ್ದಾರೆ. ಸಂಘ-ಸಂಸ್ಥೆಗಳ ಸಹಕಾರದಿಂದ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ಈ ಭತ್ತದ ಗದ್ದೆ ಸಿದ್ಧ ಮಾಡಲಾಗಿದ್ದು, ಕೆಲವೇ ದಿನಗಳಲ್ಲಿ ಭತ್ತದ ಗಿಡಗಳ ನಾಟಿಯೂ ಆರಂಭಗೊಳ್ಳಲಿದೆ. ಪುತ್ತೂರು ತಾಲೂಕಿನ ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಈ ವಿಶೇಷ ಪ್ರಯತ್ನಕ್ಕೆ ಮುನ್ನುಡಿ ಬರೆಯಲಾಗಿದೆ.
ಶಾಲಾ ಮೈದಾನದಲ್ಲಿ ಭತ್ತದ ಕೃಷಿ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ದಶಕಗಳಲ್ಲಿ ಅಡಕೆ, ರಬ್ಬರ್ ಬೆಳೆಗಳತ್ತ ವಾಲಿದ ಪರಿಣಾಮ ಭತ್ತದ ಬೇಸಾಯ ದೂರದ ಮಾತಾಗಿತ್ತು. ಈ ಬಾರಿ ಮಾತ್ರ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕರೆಯಂತೆ ಹಡಿಲು (ಬಂಜರು) ಬಿದ್ದ ಗದ್ದೆಗಳಿಗೆ ಜೀವ ನೀಡುವ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ದೇವಸ್ಥಾನ, ಶಾಲೆ, ಸಂಘ-ಸಂಸ್ಥೆಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇರಿ ಹಳ್ಳಿಹಳ್ಳಿಯಲ್ಲೂ ಖಾಲಿ ಜಾಗದಲ್ಲಿ ಗದ್ದೆ ಮಾಡಲಾಗುತ್ತಿದೆ.
ಕುಂಬ್ರ ಶಾಲೆಯ ಆಟದ ಮೈದಾನವನ್ನು ನವೀಕರಿಸಲಾಗಿದೆ. ಇದರಲ್ಲೇ ಗದ್ದೆ ಮಾಡಲು ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯ ಎಸ್‍ಡಿಎಂಸಿ ನಿರ್ಧರಿಸಿದೆ. ಈ ಬಾರಿ ಶಾಲಾರಂಭ ಮರೀಚಿಕೆಯಾಗಿರುವ ಕಾರಣ ಒಂದು ಬೆಳೆ (ಮುಂಗಾರು ಬೆಳೆಗೆ ತುಳು ಭಾಷೆಯಲ್ಲಿ "ಏಣೆಲ್' ಎನ್ನುತ್ತಾರೆ) ಬೇಸಾಯ ಮಾಡಲು ನಿರ್ಧರಿಸಿ, 80 ಸೆಂಟ್ಸ್ ಜಾಗದಲ್ಲಿ ಯಾಂತ್ರೀಕೃತ ಉಳುಮೆ ಮಾಡಿ ನೀರು ನಿಲ್ಲಿಸಿ ಬದು ಕಟ್ಟಲಾಗಿದೆ. ಮೈದಾನದ ಉಳಿದ ಜಾಗದಲ್ಲಿ ಒಣ ಬೇಸಾಯ ಮಾಡಲು ನಿರ್ಧರಿಸಲಾಗಿದೆ. ವಿದ್ಯಾಭಿಮಾನಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಶಾಲಾಭಿವೃದ್ಧಿ ಸಮಿತಿಯು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ನಾಟಿಗೆ ಬೇಕಾದ ಚಾಪೆ ನೇಜಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ನಿತೀಶ್ ಕುಮಾರ್ ಅವರ ಮನೆಯ ತಾರಸಿಯಲ್ಲೇ ಇದನ್ನು ಬೆಳೆಯಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುತುವರ್ಜಿಯಿಂದ ಶಾಲಾ ಮೈದಾನದಲ್ಲಿ ಭತ್ತದ ಬೇಸಾಯ ಮಾಡುವ ಕಾರ್ಯ ಯಾವುದೇ ವಿಘ್ನವಿಲ್ಲದೆ ನಡೆದಿದೆ.
ಶಾಲೆಯಲ್ಲಿ ಗದ್ದೆ ಮಾಡುವುದೆಂದರೆ ಅದೊಂದು ಪವಿತ್ರ ಕಾರ್ಯವೆಂದು ನಂಬಿ ನಾನು ಮನೆಯ ತಾರಸಿಯನ್ನೇ ನೇಜಿ ತಯಾರಿಗೆ ಬಿಟ್ಟುಕೊಟ್ಟೆ. ಜುಲೈ 4ರಂದು ಶಾಲೆಗೆ ಒಯ್ದು ಯಾಂತ್ರೀಕೃತ ನಾಟಿ ಮಾಡಲಾಗುತ್ತದೆ ಎಂದು ನಿತೀಶ್ ಕುಮಾರ್ ಹೇಳುತ್ತಾರೆ.
ಇದನ್ನೂ ಓದಿ:ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಡ್ರೈ ಪ್ರೂಟ್ಸ್ ಮೊರೆ ಹೋದ ತುಮಕೂರಿಗರು...
ಬೇರೆ ಕಡೆಯಿಂದ ಗಾಳಿಸಿದ ಮಣ್ಣು ತಂದು ರಾತ್ರಿ ಹೊತ್ತು ಕೆಲಸ ಮಾಡಿ ಮನೆ ತಾರಸಿ ಮೇಲೆ ಟ್ರೇಯಲ್ಲಿ ಮಣ್ಣು ಹರಡಿ ಪಾತಿ ರಚಿಸಲಾಗಿದೆ. ಟ್ರೇ ಒಂದರಲ್ಲಿ 150-200 ಗ್ರಾಂ ಬೀಜದಂತೆ ಒಟ್ಟು 120 ಟ್ರೇಗಳಲ್ಲಿ 20 ಕೆಜಿ ಬೀಜ ಬಿತ್ತಿದ್ದು, 10 ಕೆಜಿ ಬೀಜದ ನೇಜಿಯನ್ನು ಆಟದ ಮೈದಾನದ ಉಳಿದ ಭಾಗದಲ್ಲಿ ಒಣ ಬೇಸಾಯಕ್ಕೆ ಬಳಸಲು ನಿರ್ಧರಿಸಿದ್ದಾರೆ. ಪ್ರಗತಿಪರ ಕೃಷಿಕ ಮರಕ್ಕೂರು ನಾರ್ಣಪ್ಪ ಸಾಲಿಯಾನ್ ಎನ್ನುವವರು ಇದಕ್ಕೆಂದೇ 30 ಕೆಜಿ ಬಿತ್ತನೆ ಬೀಜ ಉಚಿತವಾಗಿ ನೀಡಿದ್ದು, ಉಳಿದ ಗ್ರಾಮಸ್ಥರು ಎಲ್ಲ ರೀತಿಯಿಂದಲೂ ಸಹಕರಿಸಿದ್ದಾರೆ.
ಕೂಲಿ ಕೊಟ್ಟು ಮಾಡುವುದಾದರೆ ಈ ಕೆಲಸಕ್ಕೆ ಸುಮಾರು ಎಂಟು ಲಕ್ಷದಷ್ಟು ವೆಚ್ಚ ತಗಲುತ್ತಿತ್ತು. ಆದರೆ, ಹಲವು ದಾನಿಗಳ ಸಹಕಾರದಿಂದ ಶಾಲಾ ಮೈದಾನ ಇದೀಗ ಗದ್ದೆಯಾಗಿ ಪರಿವರ್ತಿತವಾಗಿದೆ. ಶಾಲೆಯಿಂದ ತುಂಬಾ ಕೆಳ ಭಾಗದಲ್ಲಿದ್ದ ಈ ಮೈದಾನಕ್ಕೆ ಲೋಡುಗಟ್ಟಲೇ ಮಣ್ಣು ಸುರಿದು ಮೈದಾನವನ್ನು ಆಟಕ್ಕೆ ಯೋಗ್ಯವಾಗಿ ಮಾಡಲಾಗಿತ್ತು. ಈ ನಡುವೆ ಕೊರೊನಾ ಲಾಕ್ಡೌನ್ ಕಾರಣದಿಂದ ಆಟವಾಡಲು ಮಕ್ಕಳಿಲ್ಲ ಎನ್ನುವುದನ್ನು ಮನಗಂಡ ಶಾಲಾಭಿವೃದ್ಧಿ ಸಮಿತಿ ಈ ನಿರ್ಧಾರವನ್ನು ಕೈಗೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗುವ ಕೆಲಸ ಮಾಡಿದೆ.