ಪುತ್ತೂರು: ಮೆಡಿಕಲ್ ಕಾಲೇಜು ನಿರ್ಮಿಸಲು ತಾಲೂಕಿನ ಬನ್ನೂರು ಗ್ರಾಮದಲ್ಲಿ ಕಾಯ್ದಿರಿಸಲಾಗಿರುವ 40 ಎಕರೆ ಜಮೀನಿನಲ್ಲಿ ಕೇಂದ್ರ ಸರ್ಕಾರದ ಸೀ ಫುಡ್ ಪಾರ್ಕ್ ನಿರ್ಮಿಸುವ ಪುತ್ತೂರು ಶಾಸಕರ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗತೊಡಗಿದೆ.
ಕೇಂದ್ರ ಸರ್ಕಾರ 50 ಕೋಟಿ ರೂಪಾಯಿಯನ್ನು ಸೀ ಫುಡ್ ಪಾರ್ಕ್ ನಿರ್ಮಾಣ ಯೋಜನೆಗಾಗಿ ನೀಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಹಾಗೂ ಮೂಡಬಿದಿರೆಯಲ್ಲಿ ಎರಡು ಸೀ ಫುಡ್ ಪಾರ್ಕ್ ನಿರ್ಮಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಪುತ್ತೂರಿನ ಬನ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇಡಿಯಾಪು ಎಂಬಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜಿಗೆಂದು ಮೀಸಲಿಟ್ಟ 40 ಎಕರೆ ಜಾಗವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.
ಪುತ್ತೂರು ಸೀ ಫುಡ್ ಪಾರ್ಕ್ ನಿರ್ಮಾಣಕ್ಕೆ ವಿರೋಧ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗವನ್ನು ಸೀ ಫುಡ್ ಪಾರ್ಕ್ಗೆ ಬಳಸಿಕೊಳ್ಳಲು ಚಿಂತನೆ ನಡೆಸಿದ್ದಾರೆ. ಇದಕ್ಕೆ ಪುತ್ತೂರು ಶಾಸಕರೂ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ತೀರ್ಮಾನಕ್ಕೆ ಇದೀಗ ಭಾರೀ ವಿರೋಧ ವ್ಯಕ್ತವಾಗಲಾರಂಭಿಸಿದೆ. ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಈ ಜಾಗವನ್ನು ಮೆಡಿಕಲ್ ಕಾಲೇಜಿಗಾಗಿ ಮೀಸಲಿಟ್ಟಿದ್ದು, ಇದನ್ನು ಯಾವುದೇ ಕಾರಣಕ್ಕೂ ಇತರ ಉಪಯೋಗಗಳಿಗೆ ಬಳಸಬಾರದು ಎಂಬ ಒತ್ತಡಗಳು ಬರಲಾರಂಭಿಸಿವೆ.
ಸೀ ಫುಡ್ ಪಾರ್ಕ್ನಿಂದ ಬೆಳೆಯುತ್ತಿರುವ ಪುತ್ತೂರಿನಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದೆ. ಮೀನಿನ ವಿವಿಧ ಉತ್ಪನ್ನಗಳು ಪುತ್ತೂರಿನಲ್ಲಿ ತಯಾರಾಗಲಿವೆ. ಪುತ್ತೂರಿನ ಅಭಿವೃದ್ಧಿಯನ್ನು ಸಹಿಸದ ಕೆಲ ಮಂದಿ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದು, ಪುತ್ತೂರಿನ ಅಭಿವೃದ್ಧಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳು ನಿರಂತರವಾಗಿ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಸಾಕಷ್ಟು ಸ್ಥಳಾವಕಾಶಗಳಿದ್ದರೂ ಮೆಡಿಕಲ್ ಕಾಲೇಜಿಗಾಗಿ ಮೀಸಲಿಟ್ಟ ಜಾಗ ಸೀ ಫುಡ್ ಪಾರ್ಕ್ಗೆ ಬಳಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಶಾಸಕರಿಗೆ ಕ್ಷೇತ್ರದ ಯಾವ ಭಾಗದಲ್ಲೂ ಸೀ ಫುಡ್ ಪಾರ್ಕ್ ಮಾಡಲು ಅವಕಾಶವಿದೆ. ಮೆಡಿಕಲ್ ಕಾಲೇಜಿಗೆ ಮೀಸಲಿಟ್ಟ ಜಾಗವನ್ನು ಹಾಗೆಯೇ ಉಳಿಸಿಕೊಂಡು ಸೀ ಫುಡ್ ಪಾರ್ಕ್ಗೆ ಬೇರೆ ಜಾಗ ಹುಡುಕುವ ಕಾರ್ಯ ನಡೆಯಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.