ಬಂಟ್ವಾಳ :ಶಿವಮೊಗ್ಗದಲ್ಲಿ ಯುವಕನ ಹತ್ಯೆ ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡ ಸಚಿವ ಈಶ್ವರಪ್ಪ ಒಬ್ಬ ಪೆದ್ದ, ಮತಾಂಧ. 144 ಸೆಕ್ಷನ್ ಉಲ್ಲಂಘಿಸಿ ಮೆರವಣಿಗೆ ಮಾಡಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಸಚಿವ ಈಶ್ವರಪ್ಪ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿರುವುದು.. ನಗರದಲ್ಲಿ ಮಾತನಾಡಿದ ಅವರು, ಸಮಾಜ ಸಾಮರಸ್ಯದಿಂದ ಬಾಳ್ವೆ ಮಾಡಬೇಕಾದರೆ, ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದ ಅವರು, ನರೇಂದ್ರ ಮೋದಿ ದೊಡ್ಡ ಸುಳ್ಳುಗಾರ. ಹಾಗೆಯೇ ಬಿಜೆಪಿ ಕೋಮುವಾದಿ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ 144 ಸೆಕ್ಷನ್ ಉಲ್ಲಂಘಿಸಿ ಮೆರವಣಿಗೆ ಮಾಡಿದ ಸಚಿವ ಈಶ್ವರಪ್ಪ ಒಬ್ಬ ಪೆದ್ದ, ಹತ್ಯೆ ಪ್ರಕರಣಕ್ಕೆ ರಾಜಕೀಯ ಬಣ್ಣ ಹಚ್ಚುವ ಬಿಜೆಪಿಯವರ ಬಗ್ಗೆ ಜಾಗರೂಕರಾಗಿರಬೇಕು.
ಶಿವಮೊಗ್ಗದಲ್ಲಿ ಮೃತ ವ್ಯಕ್ತಿಗೆ ₹25 ಲಕ್ಷ ಕೊಟ್ಟಿದ್ದಾರೆ, ಬೆಳ್ತಂಗಡಿಯಲ್ಲಿ ದಲಿತ ಯುವಕ ಮೃತಪಟ್ಟಿದ್ದಕ್ಕೆ, ನರಗುಂದದಲ್ಲಿ ಮುಸ್ಲಿಂ ಮೃತಪಟ್ಟಿದ್ದಕ್ಕೆ ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ ಅವರು, ಬಿಜೆಪಿ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಹಚ್ಚಿದ್ದಾರೆ ಎಂದು ಕಿಡಿಕಾರಿದರು.
ಜಾತಿ ಬಿಟ್ಟು ಮನುಷ್ಯರಾಗಿ ಬದುಕಿ, ಮಹಾತ್ಮಾ ಗಾಂಧೀಜಿಯವರು ನಮಗೆಲ್ಲರಿಗೂ ಮಾರ್ಗದರ್ಶಕರು. ಗಾಂಧೀಜಿಯವರನ್ನು ಕೊಂದ ಗೋಡ್ಸೆ ವಂಶಸ್ಥರು ಇಂದು ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ.
ಗೋಡ್ಸೆ ಒಬ್ಬ ಮತಾಂಧ. ನಾವೆಲ್ಲ ಗಾಂಧೀಜಿ ಅನುಯಾಯಿಗಳು. ಈ ಆರ್ಎಸ್ಎಸ್, ಭಜರಂಗದಳ, ಶ್ರೀರಾಮಸೇನೆ ಇವರೆಲ್ಲಾ ಗೋಡ್ಸೆ ಮತ್ತು ಸಾವರ್ಕರ್ ಅನುಯಾಯಿಗಳು. ಅವರ ಕೊಡುಗೆ ದೇಶಕ್ಕೇನಿದೆ ಎಂದು ಪ್ರಶ್ನಿಸಿದರು.