ಮಂಗಳೂರು:ನಗರದಾದ್ಯಂತ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ (Methylene dioxy methamphetamine) ಎಂಡಿಎಂಎ ಅನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 6 ಲಕ್ಷ ರೂ. ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ನವಾಜ್(40), ಬಂಟ್ವಾಳ ತಾಲೂಕಿನ ಅಜರುದ್ದೀನ್ ಯಾನೆ ಅಜರ್(38) ಬಂಧಿತ ಆರೋಪಿಗಳು.
ಮಂಗಳೂರು ನಗರದ ಕದ್ರಿ ಪಾರ್ಕ್ ಪರಿಸರದಲ್ಲಿ ಇಬ್ಬರು ವ್ಯಕ್ತಿಗಳು ಎಂಡಿಎಂಎ ಮಾದಕ ವಸ್ತುವನ್ನು ತಮ್ಮ ಬಳಿ ಇಟ್ಟಿಕೊಂಡು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ಒಟ್ಟು 120 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕ ವಸ್ತು, ಮೊಬೈಲ್ ಫೋನ್ಗಳು-3, ಡಿಜಿಟಲ್ ತೂಕ ಮಾಪನ, ಸುಝುಕಿ ಅಕ್ಸಿಸ್ ಸ್ಕೂಟರ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 6,83,120 ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಆರೋಪಿಗಳ ಪೈಕಿ ನವಾಸ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಇನ್ನೋರ್ವ ಆರೋಪಿ ಅಜರುದ್ದೀನ್ ಯಾನೆ ಅಜರ್ ಎಂಬಾತನ ವಿರುದ್ದ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಪಟ್ಟಂತೆ ಒಂದು ಪ್ರಕರಣ, ಮಾದಕ ವಸ್ತು ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ, ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಎರಡು ಕಳ್ಳತನ ದಾಖಲಾಗಿವೆ. ಒಟ್ಟು ಐದು ಪ್ರಕರಣಗಳು ದಾಖಲಾಗಿವೆ.
ಮಾದಕ ವಸ್ತು, ಹುಲಿ ಉಗುರು ವಶ:ಆರೋಪಿಗಳ ಬಂಧನ: ಮಾದಕ ವಸ್ತು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದಾವಣಗೆರೆ ಸಿಇಎನ್ ಠಾಣೆಯ ಪೊಲೀಸರಿಗೆ ದೊರೆತಿತ್ತು. ಮಾಹಿತಿ ಆಧರಿಸಿ ಇತ್ತೀಚೆಗೆ ದಾಳಿ ಮಾಡಿದ್ದ ಪೊಲೀಸರು, ಮಾದಕ ವಸ್ತು ಹಾಗೂ ಹುಲಿ ಉಗುರುಗಳನ್ನು ವಶಕ್ಕೆ ತೆಗೆದುಕೊಂಡು ಏಳು ಆರೋಪಿಗಳನ್ನು ಅರೆಸ್ಟ್ ಮಾಡಿದ್ದರು.
ರಾಜಸ್ಥಾನ ಮೂಲದ ದಾವಣಗೆರೆ ಆರ್ಎಂಸಿ ಲಿಂಕ್ ರಸ್ತೆಯ ನಿವಾಸಿ ರಮೇಶ್ ಕುಮಾರ್ ಗಾಂಸಿ, ತುಮಕೂರು ಜಿಲ್ಲೆಯ ಮೂಲದ ದಾವಣಗೆರೆಯ ಬಾಲಾಜಿ ನಗರದಲ್ಲಿ ನೆಲೆಸಿದ್ದ ಅಶೋಕ್ ಕುಮಾರ್ ಎಸ್, ನಿಜಲಿಂಗಪ್ಪ ಬಡಾವಣೆಯ ರಾಮ್ ರತನ್, ವಿನೋಬ್ ನಗರದ ನಿವಾಸಿ ಕಾರ್ತಿಕ್ ಮತ್ತು ರಾಜಸ್ಥಾನ ರಾಜ್ಯ ಮೂಲದ ಬೆಂಗಳೂರಿನ ಬಸವೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದ ಸುನೀಲ್‌ಕುಮಾರ್ ಹಾಗೂ ಕೊಡಿಗೆಹಳ್ಳಿಯ ಅಶೋಕ್‌ಕುಮಾರ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಗೌರಿ ಲಂಕೇಶ್ ಕೊಲೆ ಪ್ರಕರಣ: ಆರೋಪಿಗಳಿಗೆ ಆಶ್ರಯ ನೀಡಿದ್ದ ಮೋಹನ್ ನಾಯಕ್ಗೆ ಷರತ್ತುಬದ್ಧ ಜಾಮೀನು