ಕಡಬ: ಇಲ್ಲಿಯ ರೆಂಜಿಲಾಡಿ ಗ್ರಾಮದ ನೈಲ ಸಮೀಪ ಫೆ.20ರಂದು ಬೆಳಗ್ಗೆ ಆನೆ ದಾಳಿಯಿಂದ ಇಬ್ಬರು ಮೃತಪಟ್ಟ ಹಿನ್ನೆಲೆ ಅರಣ್ಯ ಇಲಾಖೆ ಕಾಡಾನೆ ಸೆರೆ ಹಿಡಿಯಲು ಆರಂಭಿಸಿದ್ದ "ಆಫರೇಷನ್ ಎಲಿಫೆಂಟ್" ಕಾರ್ಯಾಚರಣೆ ಸ್ಥಗಿತಗೊಳಿಸಿದೆ ಎನ್ನಲಾಗಿದ್ದು, ಇದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಆದರೆ, ಕಾರ್ಯಾಚರಣೆ ಸ್ಧಗಿತ ಮಾಡಿಲ್ಲ ಎಂಬುದಾಗಿ ಜಿಲ್ಲಾ ಅರಣ್ಯ ಅಧಿಕಾರಿ ದಿನೇಶ್ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ರೆಂಜಿಲಾಡಿ ಸಮೀಪದ ನೈಲಾ ಎಂಬಲ್ಲಿ ಕಾಡಾನೆಗಳು ಇಬ್ಬರನ್ನು ಬಲಿ ಪಡೆದ ನಂತರ ಕಾಡಾನೆ ಸೆರೆ ಹಿಡಿಯುವಂತೆ ಸ್ಥಳದಲ್ಲೇ ಗ್ರಾಮಸ್ಥರಿಂದ ಪ್ರತಿಭಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ನಾಗರಹೊಳೆಯ ಮತ್ತಿಗೋಡು ಮತ್ತು ದುಬಾರೆ ಸಾಕಾನೆ ಶಿಬಿರಗಳಿಂದ ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ, ಕಂಜನ್ ಹಾಗೂ ಮಹೇಂದ್ರ ಎಂಬ ಐದು ಸಾಕಾನೆಗಳನ್ನು ಕರೆತಂದು ಕಾರ್ಯಾಚರಣೆ ಆರಂಭಿಸಲಾಗಿತ್ತು. ಆ ಬಳಿಕ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಡಿಎಫ್‌ಒ ದಿನೇಶ್ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಡಾ.ಮುಜೀಬ್ ನೇತೃತ್ವದಲ್ಲಿ ತಜ್ಞರು ಮತ್ತು ವೈದ್ಯರ ತಂಡ, ಎನ್ಐಟಿಕೆ ನೇತೃತ್ವದಲ್ಲಿ ಡ್ರೋನ್ ಕ್ಯಾಮರಾ ಮತ್ತು ಥರ್ಮಲ್ ಸ್ಕ್ಯಾನರ್ ಬಳಸಿ ಕಾಡಾನೆಯ ಚಲನವಲನಗಳನ್ನು ಪತ್ತೆ ಹಚ್ಚಿ, ಫೆ.23ರಂದು ಇಲ್ಲಿನ ಸುಂಕದಕಟ್ಟೆ - ಕೊಂಬಾರು ರಸ್ತೆಯ ಮಂಡೆಕರ ಬಳಿಯ ಅರಣ್ಯ ಪ್ರದೇಶದಲ್ಲಿ ಒಂದು ಕಾಡಾನೆ ಸೆರೆ ಹಿಡಿದಿದ್ದರು.
ಕಾರ್ಯಾಚರಣೆ ಸ್ಥಗಿತಗೊಂಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದ ಜನ:ಆ ಬಳಿಕ ಸಾಕಾನೆ ಅಭಿಮನ್ಯು ಹಾಗೂ ಇನ್ನೊಂದು ಸಾಕಾನೆ ಜೊತೆಗೆ ನಾಗರಹೊಳೆಯ ಮತ್ತಿಗೋಡು ಆನೆ ಶಿಬಿರಕ್ಕೆ ಅದನ್ನು ಸ್ಥಳಾಂತರಿಸಲಾಗಿತ್ತು. ಉಳಿದ ಮೂರು ಆನೆಗಳು ನೆಟ್ಟಣದ ಅರಣ್ಯ ಇಲಾಖೆ ಆವರಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ನಂತರದಲ್ಲಿ ಇದೀಗ ಭಾನುವಾರ ಫೆ.26ರ ಭಾನುವಾರದಂದು ರಾತ್ರಿ ನೆಟ್ಟಣದಲ್ಲಿದ್ದ ಮೂರು ಸಾಕಾನೆಗಳನ್ನೂ ನಾಗರಹೊಳೆಗೆ ಕೊಂಡೊಯ್ಯಲಾಗಿತ್ತು. ಅಲ್ಲದೇ ಇಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಇದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.