ಉಳ್ಳಾಲ: ದೇರಳಕಟ್ಟೆ ಜಸ್ಟೀಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ನುರಿತ ವೈದ್ಯರ ತಂಡ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ 37 ವರ್ಷದ ಯುವತಿಯೊಬ್ಬರಿಗೆ ಅಪರೂಪದ ತೆರೆದ ಹೃದಯದ ಕಾರ್ಡಿಯಾಕ್ ಇಂಟರ್ವೆನ್ಷಿಯಲ್ಪ್ರೊ ಸೀಜರ್ ಹೃದಯ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.
ಆಸ್ಪತ್ರೆಯ ಹೃದ್ರೋಗ ವಿಭಾಗದ ತಜ್ಞ ವೈದ್ಯರಾದ ಡಾ.ಕೆ.ಸುಬ್ರಮಣ್ಯಂ, ಡಾ.ಬಸವರಾಜ್ ಉಟಗಿ, ಡಾ.ದಿಲೀಪ್ ಜೋನ್, ಡಾ.ರಾಮ್ ಮೋಹನ್ ಭಂಡಾರಿ, ಡಾ.ಉದ್ದೇಶ್ ಮತ್ತು ಇತರ ವಿಭಾಗಗಳ ವೈದ್ಯರ ತಂಡ ಈ ಶಸ್ತ್ರ ಚಿಕಿತ್ಸೆ ನಡೆಸಿದೆ.
ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಯುವತಿ ತಪಾಸಣೆ ಮಾಡಿದಾಗ ಈಕೆಯು ಲುಟೆಂಬಾಚರ್ಸಿ ಸಿಂಡ್ರೋಮ್ ಎಂಬ ಅಪರೂಪದ ರೋಗ ಲಕ್ಷಣ ಹೊಂದಿದ್ದು, ಇದರಲ್ಲಿ ರೋಗಿಯ ಹೃದಯದ ಸೆಪ್ಟಮ್ (ಅಟ್ರಿಯಲ್ಸೆಪ್ಟಲ್ಡಿಫೆಕ್ಟ್) ನಲ್ಲಿ ಜನ್ಮಜಾತ ದೋಷವಿದ್ದು ಮತ್ತು ರುಮ್ಯಾಟಿ ಕಾಯಿಲೆಯಿಂದಾಗಿ ಕವಾಟದಲ್ಲಿ ತೊಂದರೆಯಿರುವುದು ಕಂಡು ಬಂದಿತು.
ಆಕೆಯನ್ನು 2ಡಿ ಮತ್ತು 4ಡಿ ಎಕೋಕಾರ್ಡಿಯೋಗ್ರಫಿ ಮೂಲಕ ಪರೀಕ್ಷಿಸಲಾಗಿದ್ದು, ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಬದಲು ಬಲೂನ್ ಮಿಟ್ರಲ್ ವಾಲ್ವೋಟಮಿ (ಬಿಎಂವಿ) ಮತ್ತು ಹೃತ್ಕರ್ಣದ ವಿಶೇಷ ದೋಷ ಸಾಧನ ಮುಚ್ಚುವಿಕೆಯನ್ನು ಒಳಗೊಂಡಿರುವ ಎರಡು ಕಾರ್ಯವಿಧಾನಗಳ ಸಂಯೋಜನೆಯ ಚಿಕಿತ್ಸೆ ಮಾಡಲು ನಿರ್ವಹಿಸಲಾಯಿತು.
ಆಸ್ಪತ್ರೆಯ ಹೃದ್ರೋಗ ವಿಭಾಗದ ಕ್ಯಾಥ್ ಲ್ಯಾಬ್‍ನಲ್ಲಿ ಈ ವೈದ್ಯಕೀಯ ತಂಡವು ಬಿಎಂವಿ ಮತ್ತು ಎಎಸ್‍ಡಿ ಸಾಧನಗಳಿಂದ ಸಂಯೋಜಿಸಿರುವ ಅಪರೂಪದ ಈ ಕಾರ್ಯವಿಧಾನವನ್ನು ಮಾಡಲಾಗಿದ್ದು, ಕೇವಲ ಐದೇ ದಿನಗಳಲ್ಲಿ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಮೇಜರ್ ಡಾ. ಶಿವಕುಮಾರ್ ಹಿರೇಮಠ ಮಾಹಿತಿ ನೀಡಿದರು.