ಮಂಗಳೂರು:ಇಡೀ ದೇಶದಲ್ಲೇ ಸಂಚಲನ ಸೃಷ್ಟಿಸಿದ್ದ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಅವರು ಆತ್ಮಹತ್ಯೆಗೆ ಶರಣಾಗಿ ಜುಲೈ 31(ನಾಳೆ)ಗೆ ಒಂದು ವರ್ಷವಾಗುತ್ತಿದೆ. ಆದರೆ ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.
ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಹಾಗೂ ಪೊಲೀಸರ ತನಿಖೆಯಿಂದ ಸಿದ್ದಾರ್ಥ್ ಹೆಗ್ಡೆಯದ್ದು ಆತ್ಮಹತ್ಯೆ ಎಂದು ದೃಢಪಟ್ಟಿದೆ. ಆದರೆ ಆತ್ಮಹತ್ಯೆಗೆ ಕಾರಣ ಮಾತ್ರ ಇನ್ನೂ ತಿಳಿದಿಲ್ಲ. ಜು.29, 2019ರಂದು ಬೆಂಗಳೂರಿನಿಂದ ಹೊರಟಿದ್ದ ಸಿದ್ದಾರ್ಥ್ ಅವರು ಮಂಗಳೂರಿಗೆ ಆಗಮಿಸಿ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿ 66ರ ನೇತ್ರಾವತಿ ಸೇತುವೆಯ ಬಳಿ ಚಾಲಕನ ಬಳಿ ಕಾರು ನಿಲ್ಲಿಸಲು ಹೇಳಿ ದಿಢೀರ್ ಕಣ್ಮರೆಯಾಗಿದ್ದರು. ಇದರಿಂದ ಅವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಿ ಜಿಲ್ಲಾಡಳಿತ ಅವರನ್ನು ಹುಡುಕುವ ಕಾರ್ಯ ಕೈಗೊಂಡಿತ್ತು.
ಜುಲೈ 31ರಂದು ಸಿದ್ದಾರ್ಥ್ ಮೃತದೇಹ ಅಲ್ಲಿಯೇ 4 ಕಿ.ಮೀ. ದೂರದ ಹೊಯಿಗೆ ಬಜಾರ್ ಎಂಬಲ್ಲಿ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದಿದ್ದರೂ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೂಡಿದ್ದವು. ಸರ್ಕಾರ ಪ್ರತ್ಯೇಕ ತನಿಖಾಧಿಕಾರಿಗಳ ಮೂಲಕ ತನಿಖೆ ನಡೆಸುವಂತೆ ಆದೇಶ ನೀಡಿತ್ತು. ಆರ್ ಎಸ್ಎಫ್ಎಲ್, ಫೊರೆನ್ಸಿಕ್, ಮರಣೋತ್ತರ ವರದಿ ಸೇರಿ ಎಲ್ಲಾ ಆಯಾಮಗಳ ಮೂಲಕ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಆಗ ಸಿಎಎ ವಿರೋಧಿ ಪ್ರತಿಭಟನೆ, ಈಗ ಕೊರೊನಾ ಸಂಕಷ್ಟ ಮುಂತಾದ ಕಾರಣಗಳಿಂದ ಆತ್ಮಹತ್ಯೆಯ ಕಾರಣ ಅರಿಯಲು ಹಿನ್ನಡೆಯಾಗಿದೆ. ಹಾಗಾಗಿ ಸದ್ಯಕ್ಕೆ ಸಿದ್ದಾರ್ಥ್ ಸಾವಿನ ಹಿಂದಿನ ಕಾರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಸಿದ್ದಾರ್ಥ್ ಆತ್ಮಹತ್ಯೆ ಬಳಿಕ ನೇತ್ರಾವತಿ ಸೇತುವೆ ಆತ್ಮಹತ್ಯೆಯ ಸ್ಪಾಟ್ ಎಂಬಂತೆ ಬಿಂಬಿತವಾಗಿದ್ದು, ಆ ಬಳಿಕ ಎಂಟಕ್ಕೂ ಅಧಿಕ ಜನ ಇದೇ ಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸೇತುವೆಯ ಎರಡೂ ಬದಿಗಳಿಗೆ ತಂತಿ ಬೇಲಿ ಅಳವಡಿಸುವ ಕಾರ್ಯಕ್ಕೆ ಯೋಜನೆ ಹಾಕಿದ್ದು, ಕಾಮಗಾರಿ ಪ್ರಗತಿಯಲ್ಲಿದೆ.