ಮಂಗಳೂರು: ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಮತ್ತು ಮಂಗಳೂರು ನಡುವಿನ KSRTC ಮತ್ತು ಎಲ್ಲಾ ಖಾಸಗಿ ಬಸ್ಗಳ ಸಂಚಾರವನ್ನು ಇಂದಿನಿಂದ ಅಗಸ್ಟ್ 07 ರವರೆಗೆ ನಿರ್ಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಕೇರಳದಲ್ಲಿ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಹರಡದಂತೆ ತಡೆಯಲು ಕಾಸರಗೋಡು- ಮಂಗಳೂರು ನಡುವಿನ ಬಸ್ ಸಂಚಾರ ರದ್ದು ಸೇರಿದಂತೆ ಹಲವು ಕ್ರಮಗಳಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ದಿನಂಪ್ರತಿ ಪ್ರಯಾಣಿಸುವವರು, ಕಾಲೇಜು ವಿದ್ಯಾರ್ಥಿಗಳು ಕೋವಿಡ್ ಲಸಿಕೆ ಪಡೆದಿದ್ದರೂ (2 ಡೋಸ್ ಆಗಿದ್ದರೂ ) 72 ಗಂಟೆಗಳ ಒಳಗೆ ಮಾಡಿಸಿರುವ RT - PCR ಪರೀಕ್ಷೆಯ ನೆಗಟಿವ್ ವರದಿಯ ಆಧಾರದಲ್ಲಿ 7 ದಿನಗಳ ಅವಧಿಗೆ ಅನುಮತಿಸಲಾಗುವುದು. ಕೇರಳದಿಂದ / ಮಹಾರಾಷ್ಟ್ರದಿಂದ, ಇತರ ಹೊರ ರಾಜ್ಯದಿಂದ ನರ್ಸಿಂಗ್ / ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು RT PCR ಪರೀಕ್ಷೆಯ ನೆಗೆಟಿವ್ ವರದಿ ತುರುವುದರ ಜೊತೆಗೆ ಮಂಗಳೂರಿಗೆ ಬಂದ ಬಳಿಕ ಒಂದು ವಾರದ ಕಡ್ಡಾಯ ಕ್ವಾರಂಟೈನ್ ಗೆ ಒಳಪಡಬೇಕಾಗಿದೆ.
ಏಳು ದಿನದ ಬಳಿಕ ಮತ್ತೊಮ್ಮೆ ಕೋವಿಡ್ ತಪಾಸಣೆಗೆ ಒಳಪಡಬೇಕು. RT - PCR ಪರೀಕ್ಷೆಯ ನೆಗೆಟಿವ್ ವರದಿಯನ್ನು ತರದೇ ರೈಲು ಮೂಲಕ ಗಡಿ ಪ್ರವೇಶಿಸಿದ ವ್ಯಕ್ತಿಗಳು ರೈಲ್ವೇ ಸ್ಟೇಷನ್ಗಳಲ್ಲಿ ಕೋವಿಡ್ ತಪಾಸಣೆಗೆ ಒಳಪಡಬೇಕು. ತಪಾಸಣೆಯ ವೇಳೆ ಪಾಸಿಟಿವ್ ಬಂದಲ್ಲಿ / ವರದಿ ಬರುವವರೆಗೆ ಕೋವಿಡ್ ಕೇರ್ ಸೆಂಟರ್ನಲ್ಲಿ ಕ್ವಾರಂಟೈನ್ ಆಗುವುದು ಕಡ್ಡಾಯವಾಗಿರುತ್ತದೆ .