ಮಂಗಳೂರು:ಹೊಸ ಮರಳು ನೀತಿಯಂತೆ ರಾಜ್ಯದಲ್ಲಿ 'ಒನ್ ಸ್ಟೇಟ್ ಒನ್ ಜಿಪಿಎಸ್' ತಂತ್ರಜ್ಞಾನ ಅಳವಡಿಸಲಾಗುತ್ತಿದ್ದು, ಈ ಮೂಲಕ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಆಚಾರ್ ಹಾಲಪ್ಪ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಲ್ಲಿ ಮಾತನಾಡಿದ ಅವರು, ಸಿಆರ್ಝಡ್ ಹಾಗೂ ನಾನ್ ಸಿಆರ್ಝಡ್ ನಲ್ಲಿ ಮರಳು ತೆಗೆದು ನೂತನ ತಂತ್ರಜ್ಞಾನದ ಮೂಲಕ ಆ್ಯಪ್ ಮೂಲಕ ಮರಳು ಸರಬರಾಜು ಮಾಡಲಾಗುತ್ತದೆ. ಗ್ರಾಹಕರು ಆ್ಯಪ್ಗೆ ಬಂದು ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡಲು 'ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್'ನವರು ತಯಾರಿ ಮಾಡುತ್ತಾರೆ.
ಹೊಸ ಮರಳು ನೀತಿ- 2020 ರ ಪ್ರಕಾರ ಗ್ರಾ.ಪಂ ವ್ಯಾಪ್ತಿಯ 1,2 ಮತ್ತು 3ನೇ ಶ್ರೇಣಿಯ ಹಳ್ಳಗಳ ಪಾತ್ರದಲ್ಲಿ ಗುರುತಿಸಿ ಅಧಿಸೂಚನೆ ಹೊರಡಿಸುವ 5 ಮರಳು ಬ್ಲಾಕ್ಗಳನ್ನು ಗುರುತಿಸಲಾಗಿದೆ. ಅಲ್ಲಿನ ಪಂಚಾಯತ್ಗಳಿಗೆ 300ರೂ. ಒಂದು ಟನ್ ನಂತೆ ನೀಡಲಾಗುತ್ತದೆ. ದೊಡ್ಡ ಬ್ಲಾಕ್ಗಳನ್ನು ಸಿಟಿ ಕಾರ್ಪೊರೇಷನ್ ನವರಿಗೆ ನೀಡಿ 700 ರೂ. ಗೆ ಒಂದು ಟನ್ ನಂತೆ ನೀಡಲಾಗುತ್ತದೆ. ಅದೇ ರೀತಿ ಕಾಳಸಂತೆಗೆ ಅವಕಾಶ ಕೊಡದ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.