ಬಂಟ್ವಾಳ:ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಜಡೆ ಸವರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆರೋಪಿಯನ್ನು ಶೀಘ್ರವಾಗಿ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಘಟನೆಯ ತರುವಾಯ ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ತಿರುಲೇಶ್ ಬೆಳ್ಳೂರು ನೀಡಿದ ದೂರಿನನ್ವಯ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು - ಧರ್ಮಸ್ಥಳ ಮಾರ್ಗವಾಗಿ ಚಲಿಸುವ ಕೆಎಸ್ಆರ್ಟಿಸಿ ಬಸ್ ಬಂಟ್ವಾಳ ಕಸಬಾ ಗ್ರಾಮದ ಜಕ್ರಿಬೆಟ್ಟು ಎಂಬಲ್ಲಿಗೆ ಸಂಜೆ ಸುಮಾರು 4.30 ಗಂಟೆಯ ಸಮಯಕ್ಕೆ ತಲುಪಿದಾಗ, ಮಹಿಳೆಯರು ಕುಳಿತಿರುವ ಸೀಟಿನ ಹಿಂಬದಿಯ ಸೀಟಿನಲ್ಲಿನ ವ್ಯಕ್ತಿ ಮುಂದಿನ ಸೀಟಿನಲ್ಲಿ ಕುಳಿತ ಮಹಿಳೆಯ ಜಡೆ ಎಳೆಯುವುದು, ಬೆನ್ನಿನ ಹಿಂಬದಿಯಿಂದ ಸ್ಪರ್ಶಿಸಿ ಮಹಿಳೆಯ ಮಾನಕ್ಕೆ ಕುಂದುಂಟು ಮಾಡಿದ್ದಾನೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಜೊತೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಮಂಗಳೂರಿನಿಂದ ಸಂಚಾರ ಮಾಡುತ್ತಿದ್ದ ಸರ್ಕಾರಿ ಬಸ್ನಲ್ಲಿದ್ದ ಪ್ರಯಾಣ ಮಾಡುತ್ತಿದ್ದ ಮಹಿಳೆಯರು ಹಿಂಬದಿ ಶೀಟಿನಲ್ಲಿ ಕುಳಿತುಕೊಂಡ ವ್ಯಕ್ತಿಯೊಬ್ಬ ಮಹಿಳೆಯ ಜಡೆಯನ್ನು ಸವರಿದ ವಿಡಿಯೋವನ್ನು ಸಹಪ್ರಯಾಣಿಕರು ಚಿತ್ರೀಕರಣ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಲ್ಲೆ ಹಿಂದೂ ಜಾಗರಣ ವೇದಿಕೆಯಿಂದ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಯಿತು. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ ನಾಯ್ಕ್ ಅವರು ಒತ್ತಾಯಿಸಿದ್ದಾರೆ.
ವ್ಯಕ್ತಿಯ ಕೈ ಕತ್ತರಿಸಿ ಪರಾರಿಯಾಗಿದ್ದ ಆರೋಪಿ ಬಂಧನ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ಯತ್ನಿಸಿ ವಿಫಲಗೊಂಡು, ಆತನ ಕೈಯನ್ನು ತುಂಡರಿಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಆರೋಪಿ. ಬಂಟ್ವಾಳ ನಿವಾಸಿ ಶಿವರಾಜ್ ಕುಲಾಲ್ ಎಂಬ ವ್ಯಕ್ತಿಯ ಕೈಯನ್ನು ಕತ್ತರಿಸಿ ಆರೋಪಿ ಸಂತೋಷ್ ಪರಾರಿಯಾಗಿರುವ ದೂರು ಬಂಟ್ವಾಳ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಆರೋಪಿಯನ್ನು ಬಂಧಿಸುವಲ್ಲಿ ಇನ್ಸ್ ಪೆಕ್ಟರ್ ವಿವೇಕಾನಂದ ನೇತೃತ್ವದ ಎಸ್.ಐ.ರಾಮಕೃಷ್ಣ ತಂಡ ಯಶಸ್ವಿಯಾಗಿದೆ.