ಪುತ್ತೂರು:ನಗರದ ಹೊರವಲಯದ ಬನ್ನೂರಿನಲ್ಲಿರುವ ಪತ್ನಿಯ ಮನೆಗೆ ಬಂದ ಬಂಟ್ವಾಳ ತಾಲೂಕಿನ ಕಲ್ಲಂದಡ್ಕ ನಿವಾಸಿಯೊಬ್ಬರಿಗೆ ಕೊರೊನಾ ದೃಢಪಟ್ಟಿದೆ.
ಇದೀಗ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲೇ 2ನೇ ಪ್ರಕರಣ ದಾಖಲಾಗಿರುವ ಪರಿಣಾಮ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಬನ್ನೂರಿನಲ್ಲಿರುವ ಚೆಲುವಮ್ಮನ ಕಟ್ಟೆಯ ಬಳಿಯ ಪತ್ನಿಯ ತವರು ಮನೆಗೆ ಬಂದಿದ್ದ ಕಲ್ಲಂದಡ್ಕದ ಸುಮಾರು 42 ವರ್ಷದ ವ್ಯಕ್ತಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ.
ಪತ್ನಿ ಹೆರಿಗೆ ಮತ್ತು ಬಾಣಂತನದ ಕಾರಣ ಬನ್ನೂರು ಚೆಲುವಮ್ಮನ ಕಟ್ಟೆ ಬಳಿ ಇರುವ ತನ್ನ ತವರು ಮನೆಯಲ್ಲಿದ್ದ ಹಿನ್ನೆಲೆ ಪತ್ನಿ ಮನೆಗೆ ಪತಿ ಆಗಮಿಸಿದ್ದ. ಬಳಿಕ ಜ್ವರ, ಶೀತದಿಂದ 2 ದಿನಗಳ ಹಿಂದೆ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಆಸ್ಪತ್ರೆಯಲ್ಲಿ ಅವರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ, ಕೋವಿಡ್ ಪರೀಕ್ಷೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಕೋವಿಡ್ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ವ್ಯಕ್ತಿಯನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸೋಂಕಿತನ ಪತ್ನಿ ಮತ್ತು ಆಕೆಯ 10 ದಿನದ ಮಗುವನ್ನು ಮನೆಯಲ್ಲೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.