ಬೆಳ್ತಂಗಡಿ: ಫ್ಲೆಕ್ಸ್ ಬ್ಯಾನರ್ ಅಳವಡಿಸುವಾಗ ವಿದ್ಯುತ್ ಶಾಕ್ ಹೊಡೆದು ಓರ್ವ ಮೃತಪಟ್ಟರು. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಈ ಘಟನೆ ಬೆಳ್ತಂಗಡಿ ಬಸ್ ನಿಲ್ದಾಣದ ಶ್ರೀ ಗೋಕರ್ಣನಾಥ ಕೋ-ಆಪರೇಟಿವ್ ಬ್ಯಾಂಕ್ ಮುಂಭಾಗ ನಡೆಯಿತು.
ಬೆಳ್ತಂಗಡಿಯ ಸಂಜಯನಗರ ನಿವಾಸಿ ಪ್ರಶಾಂತ್ (39) ಸಾವನ್ನಪ್ಪಿದ ಗೂಡ್ಸ್ ವಾಹನ ಚಾಲಕ. ಕೊಯ್ಯೂರು ಗ್ರಾಮದ ಮಲೆಬೆಟ್ಟು ನಿವಾಸಿ ಸಂಜೀವ ಅಚಾರ್ಯ ಅವರ ಮಗ ಸತೀಶ್ (25) ಸ್ಥಿತಿ ಗಂಭೀರವಾಗಿದೆ. ಭಾರತೀಯ ಮಜ್ದೂರು ಸಂಘ ದ.ಕ ಮತ್ತು ಉಡುಪಿ ಜಿಲ್ಲೆ ವತಿಯಿಂದ ನ.13ರಂದು ಮಂಗಳೂರಿನಲ್ಲಿ ನಡೆಯಲಿರುವ ಕುಟುಂಬ ಮಿಲನ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ಬಸ್ ನಿಲ್ದಾಣದ ಪಕ್ಕದ ರಾಷ್ಟ್ರೀಯ ಹೆದ್ದಾರಿ ಬದಿ ಪ್ರಶಾಂತ್ ಹಾಗೂ ಸತೀಶ್ ಫ್ಲೆಕ್ಸ್ ಹಾಕುತ್ತಿದ್ದರು. ಫ್ಲೆಕ್ಸ್ನ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಾಗಿದ ಪರಿಣಾಮ ಇಬ್ಬರಿಗೂ ಶಾಕ್ ಹೊಡೆದಿದೆ.