ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಹೆಸರಿನಲ್ಲಿ ಬಟ್ಟೆ ಅಂಗಡಿಗೆ ದಾಳಿ ಮಾಡಿ ಹಣ ವಸೂಲಿಗೆ ಯತ್ನಿಸಿದ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ದೀಪಕ್ ರಾಜೇಶ್ ಕುವೆಲ್ಲೋ ಬಂಧಿತ ಆರೋಪಿ. ಈತನೊಂದಿಗೆ ಇದ್ದ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ.
ದೀಪಕ್ ಮತ್ತು ಇನ್ನೋರ್ವ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರಾಗಿದ್ದಾರೆ. ಇವರು ನಿನ್ನೆ ಬೆಳಗ್ಗೆ ಹಂಪನಕಟ್ಟೆಯ ಟೋಕಿಯೋ ಮಾರ್ಕೆಟ್ನಲ್ಲಿ ತೆರೆದಿದ್ದ ಸಾಗರ್ ಕಲೆಕ್ಷನ್ ಎಂಬ ಬಟ್ಟೆ ಅಂಗಡಿಗೆ ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳ ಹೆಸರಿನಲ್ಲಿ ತೆರಳಿ ದಾಳಿ ಮಾಡಿದ್ದಾರೆ. ಲಾಕ್ಡೌನ್ ಇರುವ ಸಂದರ್ಭದಲ್ಲಿ ಅಂಗಡಿ ತೆರೆದಿದ್ದಕ್ಕೆ 50 ಸಾವಿರ ದಂಡ ಕಟ್ಟಬೇಕು. ಇಲ್ಲದಿದ್ದರೆ ಲೈಸೆನ್ಸ್ ಕ್ಯಾನ್ಸಲ್ ಮಾಡುತ್ತೇವೆ ಎಂದು ಬೆದರಿಸಿದ್ದಾರೆ.
ಪಾಲಿಕೆ ಅಧಿಕಾರಿಗಳ ಹೆಸರಲ್ಲಿ ಬಟ್ಟೆ ಅಂಗಡಿ ಮೇಲೆ ದಾಳಿ ಹಣ ಇಲ್ಲ ಎಂದು ಹೇಳಿದ ಅಂಗಡಿ ಮಾಲೀಕರಲ್ಲಿ 10 ಸಾವಿರ ಕೇಳಿದ್ದಾರೆ. ಬಿಲ್ಲನ್ನು ರಶೀದಿ ಕೊಡದೇ ಖಾಲಿ ಪೇಪರ್ನಲ್ಲಿ ಬರೆದುಕೊಟ್ಟ ಸಂದರ್ಭದಲ್ಲಿ ಸಂಶಯಗೊಂಡ ಅಂಗಡಿ ಮಾಲೀಕ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ಬಂದ ಪೊಲೀಸರು ದೀಪಕ್ ರಾಜೇಶ್ ಕುವೆಲ್ಲೋನನ್ನು ಬಂಧಿಸಿದ್ದಾರೆ. ಈ ವೇಳೆ ಈತನ ಜೊತೆಗಿದ್ದ ಮತ್ತಿಬ್ಬರು ಪರಾರಿಯಾಗಿದ್ದಾರೆ.
ಪರಾರಿಯಾಗಿರುವ ಮತ್ತಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಅವಕಾಶವಿಲ್ಲದಿದ್ದರೂ ಅಂಗಡಿ ತೆರೆದಿಟ್ಟ ಸಾಗರ್ ಕಲೆಕ್ಷನ್ ಬಟ್ಟೆ ಅಂಗಡಿ ಮಾಲೀಕ ಅಬ್ದುಲ್ ರಹಿಮಾನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ:ಸಾಮಾಜಿಕ ಕಾರ್ಯಕರ್ತ ಉದಯ ಗಾಣಿಗ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ