ಬಂಟ್ವಾಳ:ತಾಲೂಕಿನ ಮಾವಿನಕಟ್ಟೆಯಲ್ಲಿ ಯುವಜನತೆ ಮತ್ತು ವಿದ್ಯಾರ್ಥಿಗಳ ತಂಡವೊಂದು ತಾವು ಕಲಿತ ಪ್ರಾಥಮಿಕ ಶಾಲೆಗೆ ಚಿತ್ರ ಚಿತ್ತಾರದೊಂದಿಗೆ ಹೊಸ ರೂಪ ನೀಡಿದ್ದಾರೆ.
ಸುಮಾರು 25ಕ್ಕೂ ಹೆಚ್ಚು ಸದಸ್ಯರಿದ್ದ ಈ ತಂಡ ತಮ್ಮೂರಿನ ಶಾಲೆಯ ಹೊರ ಮತ್ತು ಒಳಗೋಡೆಗಳನ್ನು ವರ್ಲಿ ಕಲೆಯ ಮೂಲಕ ಆಕರ್ಷಣೀಯಗೊಳಿಸಿ ಲಾಕ್ಡೌನ್ ಸಮಯವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ವೃತ್ತಿ ಬದುಕಿನಲ್ಲಿ ಸಿವಿಲ್ ಇಂಜಿನಿಯರ್ ಆಯ್ಕೆ ಮಾಡಿಕೊಂಡಿರುವ ಚಿತ್ರಕಲಾವಿದ, ಉತ್ಸಾಹಿ ಯುವಕ ಅವಿನಾಶ್ ಬದ್ಯಾರ್ ನೇತೃತ್ವದಲ್ಲಿ ಜತೆಯಾದ ತಂಡದಿಂದ ಕೊರೊನಾ ಲಾಕ್ಡೌನ್ ವಿರಾಮದ ವೇಳೆ ರೂಪುಗೊಂಡ ಕ್ರಿಯಾತ್ಮಕ ಚಿಂತನೆಯ ಫಲವೇ ಇದು. ತಾವು ಹಿಂದೆ ಶಿಕ್ಷಣ ಕಲಿತ ಪ್ರಾಥಮಿಕ ಶಾಲೆಗೆ ಕಲೆಯ ಸೊಬಗಿನೊಂದಿಗೆ ಸುಂದರ ರೂಪ ನೀಡುವ ಯೋಜನೆ ಇದಾಗಿದ್ದು, ಇದಕ್ಕೆ ನೆಲೆಯಾಗಿದ್ದು ದ.ಕ.ಜಿ.ಪ.ಹಿರಿಯ ಪ್ರಾಥಮಿಕ ಶಾಲೆ ಶಿವನಗರ-ಮಾವಿನಕಟ್ಟೆ.
ಯುವಕರ ತಂಡ ಒಂದು ತಿಂಗಳ ಯೋಜನೆಯನ್ನು ಸಿದ್ಧಪಡಿಸಿತು. ಚಿತ್ರಕಲೆಯಲ್ಲಿ ಪಳಗಿದವರು ಹೊಸ ಕಲಾವಿದರು ಆಸಕ್ತ ವಿದ್ಯಾರ್ಥಿಗಳು ಜತೆಯಾದರು. ಸುಮಾರು 25ಕ್ಕೂ ಹೆಚ್ಚು ಮಂದಿ ಅವಿನಾಶ್ ಅವರ ಕಲ್ಪನೆಯ ಕನಸಿಗೆ ಸಾಥ್ ನೀಡಿದರು. ಕುಂಚ ಹಿಡಿದು ತಾವು ಕಲಿತ ಶಾಲೆಯ ಗೋಡೆಯ ಮೇಲೆ ಹಳೆಯ ನೆನಪುಗಳೊಂದಿಗೆ ಹೊಸ ರೂಪವನ್ನು ಕೊಟ್ಟರು. ಶಾಲೆ ಬಣ್ಣದ ಸೊಗಡಿನೊಂದಿಗೆ ಹೊಸರೂಪ ಪಡೆಯಿತು.
ಗೋಡೆ ಮೇಲೆ ವರ್ಲಿ ಚಿತ್ತಾರ ಬಿಡಿಸುತ್ತಿರುವ ಹಳೆ ವಿದ್ಯಾರ್ಥಿಗಳು ಯುವಕರ ಒಂದು ತಿಂಗಳ ಉತ್ಸಾಹ, ಉಲ್ಲಾಸದ ಪ್ರಯೋಗಶೀಲತೆಗೆ ಶಿವನಗರ ಶಾಲೆ ವರ್ಲಿ ಕಲೆಯ ಚಿತ್ರ ಚಿತ್ತಾರದೊಂದಿಗೆ ಅಂದಚೆಂದವಾಗಿ ಕಂಗೊಳಿಸಿತು. ಶಾಲಾ ಹೊರಾಂಗಣದಲ್ಲಿ ವರ್ಲಿ ಕಲೆಯಲ್ಲಿ ಮೂಡಿಬಂದ ತುಳುನಾಡಿನ ಸಂಸ್ಕೃತಿ, ಆಚರಣೆ, ಆರಾಧನೆ, ಜನಪದ ಸೊಗಡಿನ ಆಕೃತಿಗಳು ಹಾಗೂ ಹಾಲ್ನಲ್ಲಿ ಮೈದಳೆದ ಭಾರತಮಾತೆ ಮತ್ತು ಶ್ರೀ ಶಾರದಾಂಬೆಯ ಕಲಾಕೃತಿಗಳು ಗಮನ ಸೆಳೆಯುತ್ತವೆ.