ಕನ್ನಡ ಶಾಲೆಗೆ ಮರುಜೀವ ತುಂಬಿದ ಹಳೆಯ ವಿದ್ಯಾರ್ಥಿಗಳು ಬಂಟ್ವಾಳ: ಕಲ್ಲಡ್ಕ ಕಾಞಂಗಾಡ್ ರಾಜ್ಯ ಹೆದ್ದಾರಿಯಲ್ಲಿ ವಿಟ್ಲ ತಲುಪುವ ಮೊದಲು ರಸ್ತೆ ಬದಿಯಲ್ಲೇ ಇರುವ ಕೆಲಿಂಜದ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ ತಿಂಗಳಲ್ಲಿ ಬೆರಳಣಿಕೆ ಮಕ್ಕಳು ಪಾಠ ಕಲಿಯುತ್ತಿದ್ದರು. ಈ ಹಿನ್ನೆಲೆ ಈ ಸುಂದರ ಶಾಲೆ ಮುಚ್ಚಿಯೇ ಬಿಡುತ್ತದೋ ಎಂಬ ಆತಂಕವೂ ಸುತ್ತಮುತ್ತ ಜನರಿಗೆ ಕಾಡುತ್ತಿತ್ತು. ಆದರೆ ನಡೆದದ್ದೇ ಬೇರೆ.
ಹಳೆಯ ವಿದ್ಯಾರ್ಥಿಗಳು ಸಿಕ್ಕಾಗಲೆಲ್ಲಾ ಮುಖ್ಯ ಶಿಕ್ಷಕ ತಿಮ್ಮಪ್ಪ ನಾಯ್ಕ್ ಸಹಿತ ಶಿಕ್ಷಕರು ಶಾಲೆ ಉಳಿಸುವ ಬಗ್ಗೆ ಮಾತನಾಡುತ್ತಿದ್ದರು. ಇದೇ ಹೊತ್ತಿನಲ್ಲಿ ಇಂಥದ್ದೇ ಯೋಚನೆಯನ್ನು ಹಳೆಯ ವಿದ್ಯಾರ್ಥಿಗಳು ಕೈಗೊಂಡರು. ಏಪ್ರಿಲ್ ತಿಂಗಳಲ್ಲಿ ಇದಕ್ಕೆ ಮುಹೂರ್ತ ಸಿದ್ಧವಾಯಿತು. ಸಿವಿಲ್ ಇಂಜಿನಿಯರ್ ಆಗಿರುವ ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆಯಲ್ಲಿ ಸಮಿತಿ ರೂಪಿಸಿ ಶಾಲೆ ಉಳಿಸಲು ಮಾಸ್ಟರ್ ಪ್ಲ್ಯಾನ್ ಮಾಡಲಾಯಿತು.
ಸುತ್ತಮುತ್ತಲಿನ ಹತ್ತಾರು ಮಕ್ಕಳು ಇಲ್ಲಿಗೆ ಬರುವಂಥ ಯೋಜನೆ ಸಿದ್ಧಪಡಿಸಿದರು. ಜೂನ್ ತಿಂಗಳಲ್ಲಿ ಶಾಲೆ ಬಾಗಿಲು ತೆರೆದಾಗ ಎಲ್.ಕೆ.ಜಿ ಸೇರಿಸಿ ಮಕ್ಕಳ ಸಂಖ್ಯೆ 79ಕ್ಕೇರಿದೆ. ಒಮ್ಮೆಲೇ ಮೂರು ಪಟ್ಟು ಹೆಚ್ಚಳವಾಗಿದೆ!! ಅದೂ ಕನ್ನಡ ಮಾಧ್ಯಮ ಶಾಲೆಗೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಪವಾಡ ನಡೆದಿತ್ತು.
ಬೆನ್ನೆಲುಬಾದ ಹಳೆಯ ವಿದ್ಯಾರ್ಥಿಗಳು: ಕನ್ನಡ ಕಲಿಸುವ ಸರಕಾರಿ ಶಾಲೆಯಲ್ಲಿ ಇಂಥ ದಿಢೀರ್ ಬೆಳವಣಿಗೆ ಹಿಂದೆ ಬೆನ್ನೆಲುಬಾಗಿ ನಿಂತ ಹಳೆಯ ವಿದ್ಯಾರ್ಥಿಗಳ ತನು, ಮನ ಜೊತೆಗೆ ಧನದ ಕೊಡುಗೆ ಇದೆ. ಶಾಲೆ ಮುಚ್ಚುವ ಭೀತಿಯಲ್ಲಿದ್ದಾಗ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಸುಮಾರು ಹತ್ತು ಮಂದಿ ಒಂದು ದಿನ ಒಟ್ಟು ಸೇರಿ ಶಾಲೆ ಉಳಿಸುವ ತೀರ್ಮಾನ ಕೈಗೊಂಡರು. ಬಳಿಕ ಸಭೆಗಳು ನಡೆದವು. ಸಂತೋಷ್ ಶೆಟ್ಟಿ ಪೆಲತ್ತಡ್ಕ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೊಂಡಿತು.
ಕೆ.ಎಂ.ರಫೀಕ್ ಗುಳಿಗದ್ದೆ ಗೌರವಾಧ್ಯಕ್ಷರಾಗಿ, ಎನ್.ಹಮೀದ್ ಜಿ.ಎಸ್. ಉಪಾಧ್ಯಕ್ಷರಾಗಿ, ಸಂತೋಷ್ ಶೆಟ್ಟಿ ಸೀನಾಜೆ ಕಾರ್ಯದರ್ಶಿಯಾಗಿ, ದೇವಪ್ಪ ಗೌಡ ಕೆಲಿಂಜ ಕೋಶಾಧಿಕಾರಿಯಾಗಿ ತಂಡವೇ ಸಿದ್ಧಗೊಂಡಿತು. ಇವರು ಶಾಶ್ವತ ನಿಧಿಯೊಂದನ್ನು ರಚಿಸಿದರು. ದೊಡ್ಡ, ಸಣ್ಣ ಮೊತ್ತದ ದೇಣಿಗೆ ಕೂಡಿಸಿದರು. ನೋಡನೋಡುತ್ತಿದ್ದಂತೆ 25 ಲಕ್ಷ ರೂಪಾಯಿಗಳ ದೇಣಿಗೆ ಕ್ರೋಢೀಕರಣವಾಯಿತು. ಬಳಿಕ ಹಳೆಯ ವಿದ್ಯಾರ್ಥಿಗಳ ಸಮ್ಮಿಲನವೊಂದನ್ನು ಮಾಡಿ ಗಮನ ಸೆಳೆದರು. ಎಸ್.ಡಿ.ಎಂ.ಸಿ. ಅಧ್ಯಕ್ಷೆ ಜಯಂತಿ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ಹಳೆಯ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು.
ಉಚಿತ ಸಾರಿಗೆ ಜೊತೆ ಏನೆಲ್ಲಾ ಕೊಡುಗೆ?: ಶಾಲೆಗೆ ಆಗಮಿಸಲು ಎರಡು ಆಟೊರಿಕ್ಷಾಗಳನ್ನು ವಿದ್ಯಾರ್ಥಿಗಳಿಗೆ ಮೀಸಲಿರಿಸಲಾಗಿದೆ. ಇದು ಉಚಿತ. ಪ್ರತ್ಯೇಕ ಸಮವಸ್ತ್ರ, ನೋಟ್ ಪುಸ್ತಕ, ಸ್ಪೋಕನ್ ಇಂಗ್ಲಿಷ್ , ಗೌರವ ಶಿಕ್ಷಕರಿಗೆ ವೇತನ, ಮೇಜು, ಕುರ್ಚಿ, ಶುದ್ಧ ಕುಡಿಯುವ ನೀರಿನ ಘಟಕ, ಸುಸಜ್ಜಿತ ಬಿಸಿಯೂಟದ ಕೊಠಡಿ ಸೇರಿದಂತೆ ಹೀಗೆ ಶಾಲೆಗೆ ಪೂರಕವಾದವುಗಳನ್ನೆಲ್ಲ ಒದಗಿಸಿದರು. ಹೀಗಾಗಿಯೇ ಎಲ್.ಕೆ.ಜಿ. ಸೇರಿ ಒಟ್ಟು 79 ವಿದ್ಯಾರ್ಥಿಗಳು ಈಗ ವ್ಯಾಸಂಗ ಮಾಡುತ್ತಿದ್ದಾರೆ.
ಹಳೆ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಶಾಲೆ ಉಳಿಸಲು ಕಾರ್ಯೋನ್ಮುಖರಾಗಿದ್ದೇವೆ. ಸುಮಾರು 25 ಲಕ್ಷ ರೂಗಳಷ್ಟು ದೇಣಿಗೆಯಿಂದ ಮಕ್ಕಳ ಕರೆತರಲು ಉಚಿತ ವಾಹನ, ಇಬ್ಬರು ಶಿಕ್ಷಕಿಯರ ನೇಮಕ ಸಹಿತ ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ. ನಾವು ಕಲಿತ ಶಾಲೆ ಎಂಬ ಪ್ರೀತಿಯಿಂದ ನಾಡಿನ ವಿವಿಧೆಡೆ ಇರುವ ಹಳೆಯ ವಿದ್ಯಾರ್ಥಿಗಳು ಸ್ಪಂದಿಸಿದ್ದಾರೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಹೇಳಿದರು.
ಓದಿ:ಮಕ್ಕಳಿಗೆ ಕೃಷಿ ಪಾಠ: ಗದ್ದೆಗಿಳಿದು ಭತ್ತದ ಸಸಿ ನಾಟಿ ಮಾಡಿದ ವಿದ್ಯಾರ್ಥಿಗಳು