ಮಂಗಳೂರು:ಸರ್ಕಾರಿ ಶಾಲೆಗಳೆಂದರೆ ಅದೇ ಹಳೆಯ ಕಟ್ಟಡ, ಬಣ್ಣ ಹೋದ ಗೋಡೆಗಳ ಕಲ್ಪನೆ ಎದುರಿಗೆ ಬರುತ್ತದೆ. ಆದರೆ ಇಂತಹ ತಾನು ಕಲಿತ ಶಾಲೆಯೊಂದನ್ನು ಕಲಾತ್ಮಕವಾಗಿ ಮೂಡಿಸಬೇಕೆಂದು ಶಿಕ್ಷಣಾಧಿಕಾರಿಯೊಬ್ಬರು ಕನಸು ಕಂಡು ಅದನ್ನು ಈಡೇರಿಸಿಕೊಂಡಿದ್ದಾರೆ. ಸುರತ್ಕಲ್ ಹೊಸಬೆಟ್ಟುವಿನಲ್ಲಿರುವ ಸರ್ಕಾರಿ ಶಾಲೆ ಇದೀಗ ವಿವಿಧ ರೀತಿಯ ಕಲೆಗಳಿಂದ ಆಕರ್ಷಕವಾಗಿ ಕಾಣುತ್ತಿದೆ.
ಈ ಶಾಲೆಯ ಗೋಡೆಯನ್ನು ಕಂಡರೆ ಹಳೆ ಕಾಲದ ಮಕ್ಕಳು ಆಡುತ್ತಿದ್ದ ಲಗೋರಿ, ಚಿನ್ನಿದಾಂಡು, ಕುಟ್ಟಿದೊನ್ನೆ, ಕಣ್ಣಾಮುಚ್ಚಾಲೆ, ಜೋಕಾಲಿ ಮೊದಲಾದ ಆಟದ ಚಿತ್ತಾರಗಳು ಕಾಣಿಸುತ್ತದೆ. ಇಷ್ಟು ಮಾತ್ರವಲ್ಲದೇ ಕೃಷಿ, ಹಾಲು ಕರೆಯುವುದು ಮೊದಲಾದ ಚಿತ್ರಗಳು ಕಾಣಿಸುತ್ತದೆ. ಹೊಸಬೆಟ್ಟುವಿನ ಶಾಲೆಯ ಗೋಡೆಯ ಮೇಲೆ ಈ ಬಣ್ಣದ ಚಿತ್ರಗಳು ಮೂಡಲು ಕಾರಣವಾದದ್ದು ಮಂಗಳೂರಿನ ಡಿಡಿಪಿಐ ಕಚೇರಿಯಲ್ಲಿ ಇಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಯಾವತಿ ಅವರು. ಅವರು ವಿದ್ಯಾಭ್ಯಾಸ ಮಾಡಿದ ಈ ಸರ್ಕಾರಿ ಶಾಲೆಯನ್ನು ಈ ರೀತಿ ಆಕರ್ಷಕವಾಗಿ ಮಾಡಬೇಕೆಂಬ ಕನಸು ಕಂಡು ಅವರು ಈ ಕಾರ್ಯ ಮಾಡಿಸಿದ್ದಾರೆ. ಇದಕ್ಕಾಗಿ ತಮ್ಮ ದುಡಿಮೆಯ 2.5 ಲಕ್ಷ ರೂ. ಹಣವನ್ನು ಇದಕ್ಕಾಗಿ ಖರ್ಚು ಮಾಡಿದ್ದಾರೆ.