ಕರ್ನಾಟಕ

karnataka

ETV Bharat / state

ಐದು ಜನ ಮಕ್ಕಳಿದ್ದರೂ ಬೀದಿಗೆ ಬಿದ್ದ ವೃದ್ಧೆ... ಸಾಂತ್ವನ ಕೇಂದ್ರದಲ್ಲಿ ಆಶ್ರಯ - ಪುತ್ತೂರಿನಲ್ಲಿ ಬೀದಿಗೆ ಬಿದ್ದ ವೃದ್ದೆ

ಕಷ್ಟಪಟ್ಟು ತನ್ನ ಮಕ್ಕಳನ್ನು ಸಾಕಿ ಬೆಳೆಸಿದ 80ರ ಹರೆಯದ ವೃದ್ಧೆಯೊಬ್ಬರು ಇದೀಗ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆ ತನ್ನ ಮಕ್ಕಳ ಹಿಂಸೆ ತಾಳಲಾರದೇ ಮಂಗಳವಾರ ಪುತ್ತೂರು ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿಗೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

old age women on Street in Puttur Mangaluru
ಸಾಂತ್ವನ ಕೇಂದ್ರದಲ್ಲಿ ವೃದ್ದೆಯ ಅಳಲು

By

Published : Feb 12, 2020, 1:32 PM IST

Updated : Feb 12, 2020, 3:14 PM IST

ಪುತ್ತೂರು: ಕಷ್ಟಪಟ್ಟು ತನ್ನ ಮಕ್ಕಳನ್ನು ಸಾಕಿ ಬೆಳೆಸಿದ 80ರ ಹರೆಯದ ವೃದ್ಧೆಯೊಬ್ಬರು ಇದೀಗ ಬೀದಿಗೆ ಬೀಳುವ ಸ್ಥಿತಿ ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ವೃದ್ಧೆ ತನ್ನ ಮಕ್ಕಳ ಹಿಂಸೆ ತಾಳಲಾರದೆ ಮಂಗಳವಾರ ನಗರದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ತನ್ನ ಅಳಲು ತೋಡಿಕೊಂಡಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದ ಸಿಬ್ಬಂದಿ ಅವರನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ನಿವಾಸಿ ಪಾರ್ವತಿ ಮಕ್ಕಳಿಗೆ ಬೇಡವಾದ ತಾಯಿ. ಪಾರ್ವತಿ ಅವರ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಲ್ಲಿ ಕಿರಿಯ ಪುತ್ರಿಯೊಬ್ಬರು ನಿಧನರಾಗಿದ್ದಾರೆ. ಹಿರಿಯ ಪುತ್ರಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಕೆ ತನ್ನ ಮಗಳ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ತನ್ನನ್ನು ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಹಿಂಸೆ ನೀಡುತ್ತಿದ್ದಾರೆ ಎಂದು ಪಾರ್ವತಿ ಒಂದು ವರ್ಷದ ಹಿಂದೆಯೇ ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದರು. ಆ ಸಂದರ್ಭದಲ್ಲಿ ಸಾಂತ್ವನ ಕೇಂದ್ರದ ಸಿಬ್ಬಂದಿ ಆಕೆಯ ಮೂವರು ಪುತ್ರರು ಹಾಗೂ ಪುತ್ರಿಯನ್ನು ಕರೆಸಿ ಮಾತುಕತೆ ನಡೆಸಿ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದರು. ಮಾತುಕತೆಯಲ್ಲಿ ಆಕೆಯ ಮೂವರು ಪುತ್ರರು ಒಬ್ಬೊಬ್ಬರು ತಲಾ 4 ತಿಂಗಳ ಕಾಲ ತಾಯಿಯನ್ನು ಸಾಕುವುದಾಗಿ ಒಪ್ಪಿಕೊಂಡಿದ್ದರು. ಆರಂಭದಲ್ಲಿ ಬೆಳ್ತಂಗಡಿ ತಾಲೂಕು ವೇಣೂರಿನಲ್ಲಿ ನೆಲೆಸಿರುವ ಹಿರಿಯ ಪುತ್ರ ಗಂಗಾಧರ ನಾಯ್ಕ 4 ತಿಂಗಳ ಕಾಲ ತಾಯಿ ಪಾರ್ವತಿ ಅವರನ್ನು ತನ್ನ ಮನೆಯಲ್ಲಿ ನೋಡಿಕೊಂಡಿದ್ದರು.

ಬಳಿಕ ಅಲ್ಲಿಂದ ಕುಪ್ಪೆಪದವಿನಲ್ಲಿರುವ ಕೊನೆಯ ಪುತ್ರ ಶಿವರಾಮ ನಾಯ್ಕ ಅವರ ಮನೆ ಸೇರಿಕೊಂಡಿದ್ದ ಪಾರ್ವತಿ, ಅಲ್ಲಿ ನಾಲ್ಕು ತಿಂಗಳ ಕಾಲ ಕಳೆದ ಬಳಿಕ ಮೊಟ್ಟೆತ್ತಡ್ಕದಲ್ಲಿರುವ ತನ್ನ ಎರಡನೇ ಪುತ್ರ ಜಯಂತ ನಾಯ್ಕ ಅವರ ಮನೆ ಸೇರಿಕೊಂಡಿದ್ದರು. ಇದೀಗ ಮೊಟ್ಟೆತ್ತಡ್ಕಕ್ಕೆ ಬಂದು 3 ತಿಂಗಳಷ್ಟೇ ಆಗಿದ್ದು, ಮಕ್ಕಳು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಪಾರ್ವತಿ ಪುತ್ತೂರಿನ ಮಹಿಳಾ ಸಾಂತ್ವನ ಕೇಂದ್ರಕ್ಕೆ ಬಂದು ಅಳಲು ತೋಡಿಕೊಂಡಿದ್ದಾರೆ.

ಅನಾರೋಗ್ಯದ ಹಿನ್ನೆಲೆ ಒಂದು ದಿನ ಸಾಂತ್ವನ ಕೇಂದ್ರದಲ್ಲೇ ಕಳೆದ ಪಾರ್ವತಿ ಅವರನ್ನು ಉಪಚರಿಸಿದ ಸಿಬ್ಬಂದಿಗಳಾದ ನಿಶಾಪ್ರಿಯ ಮತ್ತು ರೇಖಾ, ಬಳಿಕ ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.

ಸಾಂತ್ವನ ಕೇಂದ್ರದಲ್ಲಿ ವೃದ್ದೆಯ ಅಳಲು

ವೃದ್ಧೆಯ ಸಂಕಷ್ಟಕ್ಕೆ ಕಾರಣವೇನು...?ನಾನು ಮೊಟ್ಟೆತ್ತಡ್ಕದಲ್ಲಿ 5 ಸೆಂಟ್ಸ್ ಜಾಗ ಮತ್ತು ಮನೆ ಹೊಂದಿದ್ದು, ಸಾಯುವ ತನಕ ಸಾಕುವ ಷರತ್ತಿನೊಂದಿಗೆ ಆ ಜಾಗ ಮತ್ತು ಮನೆಯನ್ನು ಎರಡನೇ ಮಗ ಜಯಂತ ನಾಯ್ಕನಿಗೆ ಬರೆದು ಕೊಟ್ಟಿದ್ದೆ. ಆದರೆ ಆತ ನನ್ನನ್ನು ಸರಿಯಾಗಿ ನೋಡಿಕೊಂಡಿಲ್ಲ. ಹಾಗಾಗಿ ನಾನು ಕರ್ಕುಂಜದಲ್ಲಿರುವ ಪುತ್ರಿ ಶಾರದಾಳ ಮನೆಯಲ್ಲಿದ್ದೆ. ಶಾರದಾ ಅನಾರೋಗ್ಯ ಪೀಡಿತಳಾದ ಬಳಿಕ ನನಗೆ ಅಲ್ಲಿರಲು ಸಾಧ್ಯವಾಗಿಲ್ಲ.

ಕಳೆದ ವರ್ಷ ನಡೆದ ಮಾತುಕತೆಯಂತೆ ಆರಂಭದ 4 ತಿಂಗಳ ಕಾಲ ಮೊದಲ ಮಗ ಗಂಗಾಧರನ ಮನೆಯಲ್ಲಿದ್ದೆ. ಆತ ಚೆನ್ನಾಗಿಯೇ ನನ್ನನ್ನು ನೋಡಿಕೊಂಡಿದ್ದ. ಆ ಬಳಿಕ ಕುಪ್ಪೆಪದವಿನಲ್ಲಿರುವ ಕೊನೆಯ ಪುತ್ರ ಶಿವರಾಮನ ಮನೆಗೆ ಹೋಗಿದ್ದೆ. ಆದರೆ ಆತ ಮತ್ತು ಆತನ ಮನೆಯವರು ಮನೆ ಮತ್ತು ಜಾಗವನ್ನು ಜಯಂತನಿಗೆ ಕೊಟ್ಟಿರುವಾಗ ನಾವ್ಯಾಕೆ ಸಾಕಬೇಕು ಎಂಬ ಪ್ರಶ್ನೆ ಎತ್ತಿ ಮಾನಸಿಕ ಹಿಂಸೆ ನೀಡುತ್ತಿದ್ದರು. ಆದರೂ ಸಹಿಸಿಕೊಂಡು 4 ತಿಂಗಳ ಕಾಲ ಅಲ್ಲಿ ಕಳೆದಿದ್ದೆ. ಇದೀಗ ಮೊಟ್ಟೆತ್ತಡ್ಕದಲ್ಲಿರುವ ಮನೆಗೆ ಬಂದು ಮೂರು ತಿಂಗಳಾಯಿತು. ಸಾಯುವ ತನಕ ಸಾಕುತ್ತೇನೆ ಎಂದು ಭರವಸೆ ಕೊಟ್ಟಿದ್ದ ಮಗ ಮತ್ತು ಸೊಸೆ ಸೇರಿಕೊಂಡು ಮಾನಸಿಕ ಹಿಂಸೆ ಕೊಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ನೀಡುತ್ತಿಲ್ಲ. ಮಧ್ಯರಾತ್ರಿ ಊಟ ಕೊಡುತ್ತಿದ್ದಾರೆ. ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ. ಬಟ್ಟೆ ಬರೆಗಳನ್ನು ನಾನೇ ತೊಳೆದುಕೊಳ್ಳಬೇಕು. ಬಟ್ಟೆ ತೊಳೆಯಲು ನೀರನ್ನೂ ಕೊಡುತ್ತಿಲ್ಲ. ಸ್ನಾನ ಮಾಡದೆ ಒಂದು ವಾರವಾಯಿತು ಎಂದು ವೃದ್ಧೆ ಪಾರ್ವತಿ ಸಾಂತ್ವನ ಕೇಂದ್ರದ ಸಿಬ್ಬಂದಿ ಮುಂದೆ ಕಣ್ಣೀರು ಹಾಕಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಾಂತ್ವನ ಕೇಂದ್ರದ ಸಿಬ್ಬಂದಿಗಳಾದ ನಿಶಾಪ್ರಿಯ ಮತ್ತು ರೇಖಾ, ಪಾರ್ವತಿ ಅವರು ವರ್ಷದ ಹಿಂದೆಯೇ ಸಾಂತ್ವನ ಕೇಂದ್ರಕ್ಕೆ ಬಂದು ಮಕ್ಕಳು ತನ್ನನ್ನು ಸಾಕುತ್ತಿಲ್ಲ, ಹಿಂಸೆ ಕೊಡುತ್ತಿದ್ದಾರೆ ಎಂದು ದೂರಿದ್ದರು. ಆ ವೇಳೆ ಆಕೆಯ ಮೂವರು ಪುತ್ರರು ಹಾಗೂ ಪುತ್ರಿಯನ್ನು ಕರೆಸಿ ಮಾತುಕತೆ ಮಾಡಿದ್ದೆವು. ಆ ಸಂದರ್ಭದಲ್ಲಿ ಮೂವರು ಪುತ್ರರು ತಲಾ 4 ತಿಂಗಳ ಕಾಲ ಸಾಕುವುದಾಗಿ ಒಪ್ಪಿಕೊಂಡಿದ್ದರು. ಆದರೆ, ಇದೀಗ ಮತ್ತೆ ಪಾರ್ವತಿ ಅವರು ಮಂಗಳವಾರ ಕೇಂದ್ರಕ್ಕೆ ಬಂದು ಅಳಲು ತೋಡಿಕೊಂಡಿದ್ದಾರೆ. ಅನಾರೋಗ್ಯದಲ್ಲಿರುವ ಹಿನ್ನೆಲೆ ಆಕೆಯನ್ನು ನಾವು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದೇವೆ. ಮೊಟ್ಟೆತ್ತಡ್ಕದಲ್ಲಿರುವ ಆಕೆಯ ಪುತ್ರನಿಗೆ ಕರೆ ಮಾಡಿದರೂ ಆತ ಸ್ಪಂದಿಸಿಲ್ಲ. ಈ ಹಿನ್ನೆಲೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದೇವೆ ಎಂದಿದ್ದಾರೆ.

Last Updated : Feb 12, 2020, 3:14 PM IST

ABOUT THE AUTHOR

...view details