ಪುತ್ತೂರು (ದಕ್ಷಿಣ ಕನ್ನಡ) : ಅಡಿಕೆ ಕ್ಯಾನ್ಸರ್ ಕಾರಕ ಎಂಬ ಆಪಾದನೆ ಇರುವ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಅದು ಮುಂದಿನ ವಿಚಾರಣೆಗೆ ಬರುವ ಸಂದರ್ಭ ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ ಎಂಬ ಸಂಶೋಧನಾ ವರದಿಯನ್ನು ಸಲ್ಲಿಸಲಾಗುವುದು ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು. ಶನಿವಾರ ಪುತ್ತೂರಿನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಪ್ರಶ್ನೆಗೆ ಉತ್ತರಿಸಿದ ಅವರು, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂಬುದನ್ನು ಸಂಶೋಧನೆ ಮಾಡುವ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯದ ಜೊತೆ ವರ್ಷದ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರ ಬಗ್ಗೆ ಸಂಶೋಧನೆ ಕೂಡ ನಡೆಯುತ್ತಿದೆ. ಅದೇ ರೀತಿ ಬೆಂಗಳೂರಿನ ರಾಮ ಇನ್‌ಸ್ಟಿಟ್ಯೂಟ್ ಜೊತೆಗೂ ಕೂಡ 2 ವರ್ಷಗಳ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತು ಪಡಿಸಲು ಸಂಶೋಧನೆ ನಡೆಯುತ್ತಿದೆ. ಹಂತ ಹಂತವಾಗಿ ವರದಿಗಳು ಬರುತ್ತಿದ್ದು, ನ್ಯಾಯಾಲಯದ ಮುಂದಿನ ವಿಚಾರಣೆ ವೇಳೆ ಈ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ವಿಮಾನ ಘಟನೆ ಬಗ್ಗೆ ಸಷ್ಟನೆ ಕೊಡಲಾಗಿದೆ.. ಕಾಂಗ್ರೆಸ್ ಟೀಕೆಯನ್ನು ವೈಭವೀಕರಿಸಲ್ಲ: ತೇಜಸ್ವಿ ಸೂರ್ಯ
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ರೂಪಿಸಲಾದ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ (ಎಆರ್‌ಡಿಎಫ್) ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದೆ. ರೋಗ ಸಂಶೋಧನೆ, ಬೆಂಬಲ ಬೆಲೆ, ಅಕ್ರಮ ಆಮದು ತಡೆ, ಗುಣಮಟ್ಟ ಪರಿಶೀಲನೆ ಇತ್ಯಾದಿ ಕ್ಷೇತ್ರದಲ್ಲಿ ಎಆರ್‌ಡಿಎಫ್ ಉತ್ತಮವಾದ ಕೆಲಸ ಮಾಡಿದೆ. ಇನ್ನಷ್ಟು ಕೆಲಸ ಮಾಡಲು ಪ್ರತಿಷ್ಠಾನದಲ್ಲಿ ಹಣದ ಕೊರತೆ ಇದೆ ಎಂದು ಹೇಳಿದರು.