ಪುತ್ತೂರು (ದಕ್ಷಿಣ ಕನ್ನಡ): ಶಾಲೆಗಳಲ್ಲಿ ತರಕಾರಿ ತೋಟ ಸಹಿತ ಇನ್ನಿತರ ಕೈತೋಟಗಳನ್ನು ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈ ಶಾಲೆಯಲ್ಲಿ ವಾಣಿಜ್ಯ ಬೆಳೆಯಾದ ಅಡಿಕೆ ತೋಟವನ್ನೇ ನಿರ್ಮಿಸಿ ಮಕ್ಕಳು ವಾಣಿಜ್ಯ ಬೆಳೆಯಲ್ಲಿ ಆಸಕ್ತಿ ಮೂಡಿಸಿಕೊಂಡಿದ್ದಾರೆ.
ಸುಮಾರು 104 ವರ್ಷಗಳ ಇತಿಹಾಸ ಇರುವ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ ಅವರ ಪ್ರೋತ್ಸಾಹದೊಂದಿಗೆ ಶಾಲೆಯ ಸುತ್ತಲೂ ಶಾಲಾ ವಿದ್ಯಾರ್ಥಿಗಳು 150 ಕ್ಕೂ ಅಧಿಕ ಅಡಿಕೆ ಸಸಿಗಳನ್ನು ನಾಟಿ ಮಾಡಿದ್ದಲ್ಲದೆ ಪೋಷಿಸುವ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ವಿಶೇಷವೆಂದರೆ ತಲಾ ಮೂರು ಅಡಿಕೆ ಗಿಡಗಳನ್ನು ಪೋಷಿಸುವ ಜವಾಬ್ದಾರಿಯನ್ನು ಓರ್ವ ವಿದ್ಯಾರ್ಥಿಗೆ ವಹಿಸಿಕೊಡಲಾಗಿದೆ. ಪ್ರತಿದಿನ ಬೆಳಗ್ಗೆ ಹಾಗೂ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬಂದು ಅಡಿಕೆ ಸಸಿಗಳಿಗೆ ನೀರು ಹಾಕುವುದು, ಗೊಬ್ಬರ ಹಾಕುವುದು ಸೇರಿದಂತೆ ಇನ್ನಿತರ ಕೆಲಸಗಳನ್ನು ಚಾಚೂ ತಪ್ಪದೇ ಮಾಡುತ್ತಿದ್ದಾರೆ.
ಶಿಕ್ಷಕರ ಕೊರತೆ ನೀಗಿಸಲು ಬೇಡಿಕೆ: ಮೂರು ಎಕರೆ ಜಾಗ ಹೊಂದಿರುವ ಈ ಶಾಲೆಯಲ್ಲಿ ಎಲ್‍ಕೆಜಿಯಿಂದ 8ನೇ ತರಗತಿಯ ಸುಮಾರು 160 ವಿದ್ಯಾರ್ಥಿಗಳಿದ್ದಾರೆ. ಏಳು ಜನ ಶಿಕ್ಷಕರಿದ್ದಾರೆ. ಶಿಕ್ಷಕರ ಸಹಕಾರವೂ ಮಕ್ಕಳಿಗೆ ಇದ್ದು, ಇಲ್ಲಿಯ ವಿದ್ಯಾರ್ಥಿಗಳು ಈಗಾಗಲೇ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಶತಮಾನ ಕಂಡ ಶಾಲೆಯಲ್ಲಿ ಎಲ್ಲವೂ ಇದೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಈ ಶಾಲೆಯ ಬೇಡಿಕೆ ಏನೆಂದರೆ ಶಿಕ್ಷಕರ ಕೊರತೆ, ಶಾಲೆಗೆ ಪೂರಕವಾದ ಶಿಕ್ಷಕರು ಬೇಕು. ಇನ್ನೊಂದು ಹೈಸ್ಕೂಲ್ ಆರಂಭಿಸಲು ಸರ್ಕಾರದಿಂದ ಪರವಾನಿಗೆ ಬೇಕು ಎನ್ನುವುದು.
ಇದಕ್ಕೆ ಪೂರಕವಾಗಿ ಈ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ಲಭ್ಯತೆಯೂ ಇದೆ. ಒಂಭತ್ತನೇ ತರಗತಿಗಾಗಿ ಪರವಾನಿಗಾಗಿ ಮೂರು ವರ್ಷಗಳಿಂದ ಮನವಿಯನ್ನು ನೀಡುತ್ತಾ ಬಂದಿದ್ದೇವೆ. ಶಾಸಕರಿಗೂ ಈಗಾಗಲೇ ಮನವಿ ನೀಡಲಾಗಿದೆ. ನಮ್ಮ ಬೇಡಿಕೆ ಈಡೇರಿಸುವಂತೆ ಮತ್ತೊಮ್ಮೆ ಮನವಿ ನೀಡಲಾಗುವುದು. ಸರ್ಕಾರದ ಅನುದಾನವಿಲ್ಲದೆ ಊರವರ ದಾನಿಗಳ ಸಹಕಾರದಿಂದ ಈ ಶಾಲೆ ಬೆಳೆದು ಬಂದಿದೆ. ಒಟ್ಟಿನಲ್ಲಿ ಈ ಶಾಲೆಯನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ಆಶಯ ಎಂದು ಹೇಳುತ್ತಾರೆ ಎಸ್‍ಡಿಎಂಸಿ ಸದಸ್ಯ ಪ್ರವೀಣ್ ಆಚಾರ್ಯ.