ಉಳ್ಳಾಲ:ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯಿಂದ ಆಗಂತುಕರಿಬ್ಬರು ಮೊಬೈಲ್ ಕಳವು ನಡೆಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ತೊಕ್ಕೊಟ್ಟು-ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶನಿವಾರ ರಾತ್ರಿ ವೇಳೆ ನಡೆದಿದೆ.
ಕುನ್ಸಾಂಗ್ ಲಚಿಕ್ ಅನ್ನುವ ನರ್ಸಿಂಗ್ ವಿದ್ಯಾರ್ಥಿನಿ ಕೈಯಲ್ಲಿದ್ದ ಮೊಬೈಲ್ ಅನ್ನು ಆಗಂತುಕರು ಕಳವು ನಡೆಸಿದ್ದಾರೆ. ಇಲ್ಲಿನ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿಯರಿಬ್ಬರು ಹಾಗೂ ಓರ್ವ ವಿದ್ಯಾರ್ಥಿ ದೇರಳಕಟ್ಟೆಯಲ್ಲಿ ಶಾಪಿಂಗ್ ನಡೆಸಿ ಹಾಸ್ಟೆಲ್ ಕಡೆಗೆ ವಾಪಸ್ ಆಗುತ್ತಿದ್ದ ಸಂದರ್ಭ ಘಟನೆ ನಡೆದಿದೆ.
ಮೂವರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ದೇರಳಕಟ್ಟೆಯಿಂದ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಸ್ಕೂಟರಿನಲ್ಲಿ ಬಂದ ಇಬ್ಬರು ವಿದ್ಯಾರ್ಥಿನಿಯ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕತ್ತಲೆಯ ಹಾದಿ ಅಪಾಯಕ್ಕೆ ನಾಂದಿ:ನಾಲ್ಕು ವೈದ್ಯಕೀಯ ಕಾಲೇಜುಗಳು ಒಟ್ಟಾಗಿರುವ ದೇರಳಕಟ್ಟೆ ಜಂಕ್ಷನ್ ವಸತಿ, ವಾಣಿಜ್ಯ ಹಾಗೂ ಅಂಗಡಿ ಮುಂಗಟ್ಟುಗಳಿಂದ ತುಂಬಿ ಅಭಿವೃದ್ಧಿ ಹೊಂದಿದ್ದರೂ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ. ಕ್ಷೇಮ ಆಸ್ಪತ್ರೆಯಿಂದ - ಫಾದರ್ ಮುಲ್ಲರ್ ಆಸ್ಪತ್ರೆಯ ತನಕ ಬೀದಿ ದೀಪಗಳಿವೆ. ಅತ್ತ ದೇರಳಕಟ್ಟೆ ಜಂಕ್ಷನ್ ನಲ್ಲಿ ಮಾತ್ರ ಬೀದಿ ದೀಪಗಳು ಉರಿಯುತ್ತವೆ.
ಆದರೆ ಅಯ್ಯಪ್ಪ ದೇವಸ್ಥಾನ ಬೆಳ್ಮ ಗ್ರಾಮ ಪಂಚಾಯತ್ ಸುತ್ತ ರಸ್ತೆಬದಿಯಲ್ಲಿ ಬೀದಿ ದೀಪಗಳಿಲ್ಲ. ಇದರಿಂದ ಇಲ್ಲಿ ಕಳ್ಳತನ ಮಾಡಲು ಸುಲಭವಾಗಿದೆ. ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ನಡೆದುಕೊಂಡು ಹೋಗುವ ರಸ್ತೆಯಲ್ಲಿ ಬೀದಿ ದೀಪಗಳಿಲ್ಲದೆ ದೌರ್ಜನ್ಯಕ್ಕೆ ಒಳಗಾಗುವ ಅಪಾಯವಿದೆ.
ಕೆಲ ವರ್ಷಗಳ ಹಿಂದೆ ಬೆಳ್ಮ ಗ್ರಾಮ ಪಂಚಾಯಿತಿ ಕಟ್ಟಡದ ಎದುರು ರಸ್ತೆಬದಿಯಿಂದಲೇ ವೈದ್ಯ ವಿದ್ಯಾರ್ಥಿನಿಯನ್ನು ಅಪಹರಿಸಿದ ಸಾಮೂಹಿಕ ಅತ್ಯಾಚಾರವೆಸಗಿತ್ತು. ಮತ್ತೊಂದು ಪ್ರಕರಣ ಆಗುವ ಮುನ್ನ ಆಡಳಿತ ಎಚ್ಚೆತ್ತುಕೊಂಡು ದಾರಿದೀಪ ಹಾಗೂ ಸಿಸಿಟಿವಿಯನ್ನು ಅಳವಡಿಸುವತ್ತ ಗಮನಹರಿಸಬೇಕಿದೆ.
ಇದನ್ನೂ ಓದಿ :ಮಣಪ್ಪುರಂ ಗೋಲ್ಡ್ ಲೋನ್ ಫೈನಾನ್ಸ್ನಲ್ಲಿ ಹಗಲು ದರೋಡೆ: 15 ಕೆಜಿ ಚಿನ್ನ, 7 ಕೋಟಿ ನಗದು ದೋಚಿದ ಕಳ್ಳರು