ಮಂಗಳೂರು:ಕೇಂದ್ರ ಸರ್ಕಾರವು ಎನ್ಎಂಪಿಟಿಯನ್ನು ಖಾಸಗೀಕರಣ ಮಾಡಲು ಹೊರಟಿದೆ. ಇದರಿಂದ ಸುಮಾರು 3 ಸಾವಿರ ಮಂದಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಆದ್ದರಿಂದ ಎನ್ಎಂಪಿಟಿಯಲ್ಲಿ ಶೇ.50ರಷ್ಟು ಉದ್ಯೋಗ ಸ್ಥಳೀಯರಿಗೆ ನೀಡಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದರು.
NMPTಯಲ್ಲಿ ಶೇ. 50ರಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ಸಿಗ್ಬೇಕು.. ಮಾಜಿ ಸಚಿವ ಖಾದರ್ ಒತ್ತಾಯ - ನವ ಮಂಗಳೂರು ಬಂದರು ಖಾಸಗೀಕರಣ
ಕೇಂದ್ರ ಸರ್ಕಾರವು ಎನ್ಎಂಪಿಟಿಯನ್ನು ಖಾಸಗೀಕರಣ ಮಾಡಲು ಹೊರಟ್ಟಿದ್ದು, ಎನ್ಎಂಪಿಟಿಯಲ್ಲಿ ಶೇ. 50ರಷ್ಟು ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಮಾಜಿ ಸಚಿವ ಯು ಟಿ ಖಾದರ್ ಹೇಳಿದ್ದಾರೆ.
ನಗರದ ಸರ್ಕೀಟ್ಹೌಸ್ನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಎನ್ಎಂಪಿಟಿಯ ಒಂದು ಭಾಗವನ್ನು ಚೆಟ್ಟಿನಾಡು ಕಂಪನಿಯವರಿಗೆ ಹಾಗೂ ಮತ್ತೊಂದು ಭಾಗವನ್ನು ಮುಂದಿನ ಎರಡು ತಿಂಗಳುಗಳಲ್ಲಿ ಜೆಎಸ್ಡಬ್ಲ್ಯು ಕಂಪನಿಯವರಿಗೆ ವಹಿಸುತ್ತಿದೆ. ದ.ಕ ಜಿಲ್ಲೆಯ 20-30 ಕಂಪನಿಗಳು ಇದರ ಅಧೀನದಲ್ಲಿ ವ್ಯವಹಾರ ನಡೆಸುತ್ತಿವೆ. ಇದರಲ್ಲಿ 3,000-4,000 ಜನ ದುಡಿಯುತ್ತಿದ್ದರು. ಆದರೆ, ಈಗ ಆ ಕಂಪನಿಗಳನ್ನೆಲ್ಲಾ ಮುಚ್ಚಿ ಕೇವಲ ಚೆಟ್ಟಿನಾಡು ಹಾಗೂ ಜೆಎಸ್ಡಬ್ಲ್ಯು ಕಂಪನಿಗೆ ವಹಿಸಲಾಗುತ್ತಿದೆ. ಆದ್ದರಿಂದ ಇಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡಲು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಅಲ್ಲದೇ ನವ ಮಂಗಳೂರು ಬಂದರನ್ನು ಖಾಸಗೀಕರಣ ಮಾಡಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತಿದ್ದೇವೆ ಎಂದು ಹೇಳಿದರು. ಕೇಂದ್ರ ಸರ್ಕಾರದ ನಿರ್ಧಾರದಿಂದ ದ.ಕ ಜಿಲ್ಲೆಯ ವಿಮಾನ ನಿಲ್ದಾಣ, ಬಂದರು ಖಾಸಗೀಕರಣವಾಯಿತು. ಈಗ ಬೇರೆ ರಾಜ್ಯಗಳ ಉದ್ಯೋಗಿಗಳು ಇಲ್ಲಿನ ಬ್ಯಾಂಕುಗಳಲ್ಲಿ ಇರುವುದರಿಂದ ಸಂವಹನ ನಡೆಸಲು ಜನಸಾಮಾನ್ಯರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಬ್ಯಾಂಕುಗಳಲ್ಲಿಯೂ ಕೂಡಾ ಕನಿಷ್ಠ ಶೇ. 50ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲಿಡಬೇಕು. ಉಡುಪಿ, ಕಾರವಾರ ಹಾಗೂ ದ.ಕ ಜಿಲ್ಲೆಯ ಸಂಸದರು ಕೇಂದ್ರ ಸರ್ಕಾರದ ಮೇಲೆ ಈ ಬಗ್ಗೆ ಒತ್ತಡ ತರಬೇಕು ಎಂದು ಯು ಟಿ ಖಾದರ್ ಆಗ್ರಹಿಸಿದರು.