ಪುತ್ತೂರು: ಕೊರೊನಾ ವೈರಸ್ ಸೋಂಕು ವಿಶ್ವವನ್ನೇ ತಲ್ಲಣಗೊಳಿಸಿದೆ. ದೇಶದಲ್ಲಿಯೂ ಕೊರೊನಾ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ಶ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್ ಆಗಿ ದುಡಿಯುತ್ತಿರುವ ಎನ್‌ಪಿಎಸ್ ನೌಕರರಿಗೂ ಮಹಾಮಾರಿ ಎದುರಾಗಿದೆ. ಈ ನಿಟ್ಟಿನಲ್ಲಿ ಎನ್‌ಪಿಎಸ್ ನೌಕರರ ಸಂಘ ಜೂ.26ರಂದು ಎನ್.ಎಮ್.ಒ.ಪಿ.ಎಸ್ ವತಿಯಿಂದ ಟ್ವಿಟ್ಟರ್ ಅಭಿಯಾನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಪುತ್ತೂರು ತಾಲೂಕು ಎನ್.ಪಿ.ಎಸ್ ಸಂಘದಿಂದ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸುವ ಮತ್ತು ಬೇಡಿಕೆಯ ಅಭಿಯಾನಕ್ಕೆ ಚಾಲನೆ ನೀಡಿದರು.
ರಾಜ್ಯದಲ್ಲಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಅನೇಕ ಹೋರಾಟಗಳೇ ನಡೆದಿದೆ. ರಾಜ್ಯ ಸರ್ಕಾರವೂ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದ್ದರೂ ಇದುವರೆಗೂ ಈಡೇರಿಸಿಲ್ಲ. ಇದೀಗ ಕೊರೊನಾ ವಾರಿಯರ್ಸ್ ಆಗಿ ಬಹುತೇಕ ಎನ್‌ಪಿಎಸ್ ನೌಕರರು ದುಡಿಯುತ್ತಿದ್ದಾರೆ. ಇಂತಹ ಎನ್‌ಪಿಎಸ್ ನೌಕರರು ಹಾಗೂ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ರಾಜ್ಯ ಸರ್ಕಾರದ ಕರ್ತವ್ಯ. ಈ ನಿಟ್ಟಿನಲ್ಲಿ ಎನ್‌ಎಮ್‌ಒಪಿಎಸ್ ಕಾರ್ಯಕಾರಿ ಸಮಿತಿಯು ಪ್ರಸಕ್ತ ಸಂದರ್ಭದಲ್ಲಿ ಸರ್ಕಾರದ ಗಮನವನ್ನು ನಮ್ಮ ಸಮಸ್ಯೆಗಳ ಕಡೆ ಸೆಳೆಯಲು ಟ್ವಿಟರ್ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ಎನ್‌ಪಿಎಸ್ ಪುತ್ತೂರು ತಾಲೂಕು ಕಾರ್ಯದರ್ಶಿ ವಿಮಲ್ ಕುಮಾರ್ ಹೇಳಿದರು.