ಉಳ್ಳಾಲ: ಉಳ್ಳಾಲ ಊರೂಸ್ ನಿಮಿತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ ಕ್ಷೇತ್ರಕ್ಕೆ ಭೇಟಿ ನೀಡಿ ಕೆಲಕಾಲ ದರ್ಗಾದಲ್ಲಿ ಪ್ರಾರ್ಥಿಸಿದರು. ಬಳಿಕ ತೊಕ್ಕೊಟ್ಟು ಕೋರ್ದಬ್ಬು ದೈವಸ್ಥಾನಕ್ಕೆ ಭೇಟಿ ನೀಡಿ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ತೊಕ್ಕೊಟ್ಟು ಕಲ್ಲಾಪುವಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಳ್ಳಾಲ ಮತ್ತು ಮುಡಿಪು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕರ್ತರನ್ನು ಉದ್ದೇಶಿಸಿ ಹಾಲಿ ಬಿಜೆಪಿ ಸರಕಾರ ಅತ್ಯಂತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಯಾವುದೇ ಸರಕಾರಿ ಕಾಮಗಾರಿ ಆಗ ಬೇಕಾದರೆ ನಲವತ್ತು ಪರ್ಸೆಂಟ್ ಕಮೀಷನ್ ಕೆಳುತ್ತಾರೆ ಎಂದು ದೂರಿದರು.
ನಾವು ಮಾಡಿದ ಗಂಗಾ ಕಲ್ಯಾಣ, ಇಂದಿರಾ ಕ್ಯಾಂಟೀನ್ ಮುಂತಾದ ಯೊಜನೆಗಳಿಗೆ ಹಣ ಇಲ್ಲ ಎಂದು ಕಡೆಗಣಿಸಿದ್ದಾರೆ. ಹಣವನ್ನೆಲ್ಲ ಕೊರೊನಾದ ಹೆಸರು ಹೇಳಿ ಇವರೇ ನುಂಗಿದ್ದಾರೆ. ಇನ್ನಾದರೂ ಜನತೆ ಎಚ್ಚೆತ್ತು ಕೊಳ್ಳಿ ಮುಂದಿನ ಬಾರಿ ಕಾಂಗ್ರೆಸ್ ಸರಕಾರಕ್ಕೆ ಬಹುಮತ ನೀಡಿ ಎಂದರು.
ದ.ಕ ಜಿಲ್ಲೆಯವರು ರಾಜಕೀಯವಾಗಿ ಪ್ರಬುದ್ಧತೆ ಇರುವ ಜನ, ಅರ್ಥ ಮಾಡಿಕೊಳ್ಳುವ ಜನ, ಯಾವುದೇ ರಾಜಕೀಯ ಪಕ್ಷವನ್ನು ವಿಚಾರ ಮಾಡದೇ, ವಿಮರ್ಶೆ ಮಾಡದೇ ಬೆಂಬಲಿಸಬಾರದು. ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಾ ಇಲ್ಲವಾ ಅನ್ನುವುದನ್ನು ಗಮನಿಸಿ ಆಯ್ಕೆ ಮಾಡಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭ ಶಾಸಕ ಯುಟಿ ಖಾದರ್, ಮಾಜಿ ಶಾಸಕರುಗಳಾದ ಜೆ.ಆರ್ ಲೋಬೊ, ಮೊಯ್ದೀನ್ ಬಾವಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಪುರಸಭೆ ಮಾಜಿ ಸದಸ್ಯ ದಿನೇಶ್ ರೈ, ಜಿ.ಪಂ ಮಾಜಿ ಸದಸ್ಯೆ ಮಮತಾ ಡಿ.ಎಸ್ ಗಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ:ಸಂಕಷ್ಟ ನಿವಾರಣೆಗೆ ಶನೇಶ್ವರ ಹೋಮ ಮಾಡಿಸಿದ ಸಚಿವ ಈಶ್ವರಪ್ಪ