ಮಂಗಳೂರು : ನಗರದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ಕ್ರಾಂತಿ ಪುರುಷರು ಕೋಟಿ-ಚೆನ್ನಯರ ಹೆಸರನ್ನು ಮರುನಾಮಕರಣ ಮಾಡಬೇಕೆನ್ನುವ ಕೂಗು ಬಲವಾಗಿ ಕೇಳಿ ಬರ್ತಿದೆ.
ಇದರ ಮಧ್ಯೆಯೇ ಇಂದು ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯಿಂದ ಸುಸ್ವಾಗತ, ಕೋಟಿ-ಚೆನ್ನಯರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂಬ ಕಟೌಟ್ ಅನ್ನು ವಿಮಾನ ನಿಲ್ದಾಣಕ್ಕೆ ಹೋಗುವ ಕೆಂಜಾರು ಸಮೀಪದ ದಾರಿಯಲ್ಲಿ ಅಳವಡಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಹಾಗೂ ಇನ್ನಿತರ ಇತಿಹಾಸ, ರಾಜಕೀಯ ವ್ಯಕ್ತಿಗಳ ಹೆಸರು ಮರು ನಾಮಕರಣ ಮಾಡಬೇಕೆಂಬ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿತ್ತು.
ಇದೀಗ ಮಂಗಳೂರು ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ನಿರ್ವಹಣೆ ಮಾಡಲು ವಹಿಸಿಕೊಂಡಿರುವ ಅದಾನಿ ಕಂಪನಿ ತನ್ನ ಹೆಸರನ್ನು ಹಾಕಿದ ಬಳಿಕ ಮತ್ತೆ ಕೋಟಿ-ಚೆನ್ನಯರ ಹೆಸರು ನಾಮಕರಣ ಮೇಲ್ಪಂಕ್ತಿಗೆ ಬಂದಿದೆ.
ಇದೀಗ ಕೋಟಿ-ಚೆನ್ನಯರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂಬ ಬ್ಯಾನರ್ ಅಳವಡಿಕೆಯಾಗಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿದೆ.