ಮಂಗಳೂರು : ಹಿಂದೆಂದು ಇಲ್ಲದಂತಹ ಬರದ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದೆ. ನೇತ್ರಾವತಿ ಮತ್ತು ಕುಮಾರಧಾರ ನದಿಗಳ ಸಂಗಮ ಸ್ಥಾನವಾಗಿರುವ ಉಪ್ಪಿನಂಗಡಿಯಲ್ಲಿ ನದಿ ಸಂಪೂರ್ಣ ಬತ್ತಿ ಹೋಗಿದ್ದು, ತುಂಬಿ ತುಳುಕುತ್ತಿದ್ದ ನದಿ ಇದೀಗ ಖಾಲಿ ಮೈದಾನವಾಗಿದೆ.
ವರ್ಷದ ಹಿಂದೆ ಇದೇ ವೇಳೆಗೆ ಸುರಿದ ಭಾರಿ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ ನದಿ ತುಂಬಿ ತುಳುಕುತ್ತಿತ್ತು. ಆದರೆ ಇದೀಗ ನೇತ್ರಾವತಿಯ ಒಡಲು ಬರಿದಾಗಿದ್ದು, ಖಾಲಿ ಮೈದಾನದಂತಾಗಿದೆ. ಮಂಗಳೂರು ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಡ್ಯಾಮ್ ಕಟ್ಟಿ ನೀರು ಶೇಖರಿಸಲಾಗುತ್ತದೆ. ಸದ್ಯ ಈ ನೀರು ಜೂನ್ 10 ರ ವರೆಗೆ ಮಾತ್ರ ಬಳಕೆಗೆ ಬರುತ್ತದೆ. ಆ ಬಳಿಕ ನಗರದಲ್ಲಿ ನೀರಿಗೆ ಹಾಹಾಕಾರ ಉಂಟಾಗಲಿದೆ.
ಬರಿದಾದ ಕುಮಾರಧಾರ, ನೇತ್ರಾವತಿ ನದಿ ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಒಂದು ಬದಿಯಿಂದ ನೇತ್ರಾವತಿ ನದಿ ಮತ್ತೊಂದು ಬದಿಯಿಂದ ಕುಮಾರಧಾರ ಹರಿದು ಬಂದು ದೇವಸ್ಥಾನದ ಹತ್ತಿರ ಸಂಗಮವಾಗಿ ಎರಡು ನದಿಗಳು ಇಲ್ಲಿಂದಲೇ ಮುಂದೆ ಹರಿಯುತ್ತವೆ. ಬೆಸಿಗೆಯಲ್ಲೂ ತುಂಬಿ ಹರಿಯಬೇಕಿದ್ದ ನದಿ ಬರದ ಛಾಯೆಗೆ ಬತ್ತಿದ್ದು, ನದಿಯಲ್ಲಿ ಕಣ್ಣು ಹಾಯಿಸಿದಷ್ಟು ಮರಳು ಕಾಣುತ್ತದೆ.
ದೇವಸ್ಥಾನದಲ್ಲಿ ಪಿಂಡ ಪ್ರಧಾನ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಇದಕ್ಕೆಲ್ಲ ಈ ನದಿ ನೀರಿನ ಬಳಕೆ ಆಗುತ್ತಿತ್ತು. ಸದ್ಯ ಪಿಂಡ ಪ್ರಧಾನಕ್ಕೂ ನದಿಯಲ್ಲಿ ನೀರು ಹುಡುಕಬೇಕಾದ ಪರಿಸ್ಥಿತಿ ಎದುರಾಗಿದೆ.
ಹಿಂದೆದೂ ನೇತ್ರಾವತಿ ನದಿ ನೀರು ಬತ್ತಿಲ್ಲ. ನಾನು ಚಿಕ್ಕವನಿದ್ದಾಗ ಹಿಂದೊಮ್ಮೆ ಈ ರಿತಿಯಾಗಿದ್ದು ಬಿಟ್ಟರೆ ಯಾವತ್ತು ಹೀಗೆ ಆಗಿದ್ದಿಲ್ಲ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.