ಬಂಟ್ವಾಳ: ಬೀದಿಬದಿ ವ್ಯಾಪಾರಿಗಳಿಗೊಂದು ನಿರ್ದಿಷ್ಟ ಜಾಗ ಗುರುತಿಸಲುಬಂಟ್ವಾಳ ಪುರಸಭೆಗೆ ಇನ್ನೂ ಸಾಧ್ಯವಾಗಿಲ್ಲ. ಸಂಚಾರ ದಟ್ಟಣೆಯಿರುವ ಜಾಗ ಹಾಗೂ ಇಕ್ಕಟ್ಟಾದ ಸ್ಥಳದಲ್ಲಿ ವ್ಯಾಪಾರಿಗಳು ಕಾಣಿಸುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಆಗುವುದರ ಜೊತೆಗೆ ಪಾದಚಾರಿಗಳಿಗೂ ಸಮಸ್ಯೆ ಎದುರಾಗುತ್ತಿದೆ.
2017ರ ಅಕ್ಟೋಬರ್ ತಿಂಗಳಲ್ಲಿ ಬಂಟ್ವಾಳ ಪುರಸಭೆಯಲ್ಲಿ ಬೀದಿಬದಿ ವ್ಯಾಪಾರಸ್ಥರ ಸಭೆ ನಡೆದಿತ್ತು. ಆಗ ಜಕ್ರಿಬೆಟ್ಟು, ಬಡ್ಡಕಟ್ಟೆ, ಬಿ.ಸಿ. ರಸ್ತೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರಿಗೆ ವಲಯ ನಿರ್ಮಿಸಿಕೊಡುವ ಪ್ರಸ್ತಾವನೆ ಬಂತು. ಇನ್ನೇನು ಕಾರ್ಯರೂಪಕ್ಕೆ ಬರುತ್ತದೆ ಎಂದಾಗ ಸಾಕಷ್ಟು ಬೆಳವಣಿಗೆಗಳು ನಡೆದು ಹೋದವು. ಫ್ಲೈಓವರ್ ಅಡಿಯಲ್ಲಿ, ರಸ್ತೆ ಬದಿಯಲ್ಲಿ, ದೇವಸ್ಥಾನದ ಪಕ್ಕ ಹೀಗೆ ಬಿ.ಸಿ. ರೋಡಿನ ಅಲ್ಲಲ್ಲಿ ತರಕಾರಿ, ಮೆಣಸು, ದಿನಬಳಕೆಯ ಅಡುಗೆ ಪದಾರ್ಥಗಳನ್ನು ಮಾರಾಟ ಮಾಡುವವರು ಹೆಚ್ಚಾದರು.
ಬಂಟ್ವಾಳದಲ್ಲಿ ಬೀದಿಬದಿ ವ್ಯಾಪಾರಿಗಳಿಗಿಲ್ಲ ನಿರ್ದಿಷ್ಟ ಜಾಗ ಆಗಾಗ ಅವರನ್ನು ಎಬ್ಬಿಸುವುದು, ವಾರದ ಬಳಿಕ ಮತ್ತೆ ಅದೇ ಜಾಗದಲ್ಲಿ ಕುಳಿತುಕೊಳ್ಳುವುದು ನಡೆದವು. ಇದೇ ವೇಳೆ ನೇತ್ರಾವತಿ ನದಿಯಲ್ಲಿ ಸಾಕಷ್ಟು ನೀರು ಹರಿಯಿತು. ಬಂಟ್ವಾಳದಲ್ಲಿ ಸಾಕಷ್ಟು ಬದಲಾವಣೆಗಳೂ ಆದವು. ಭರವಸೆಗಳ ಸ್ವರೂಪಗಳೂ ಮಾರ್ಪಾಡಾದವು. ಆದರೆ 2021 ಜನವರಿ ತಿಂಗಳು ಬಂದರೂ ಬೀದಿಬದಿ ವ್ಯಾಪಾರಿಗಳಿಗೆ ಸೂಕ್ತ ಜಾಗ ಗುರುತು ಆಗಿಲ್ಲ. ಮೀಟಿಂಗ್ಗಳು ಇನ್ನೂ ಜಾರಿಯಲ್ಲಿದ್ದು, ಹೊಸ ವ್ಯಾಪಾರಿಗಳ ಪ್ರವೇಶವಾಗುತ್ತಿದೆ.
2015-16ನೇ ಸಾಲಿನಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನವು ನಗರದ ಬೀದಿಬದಿ ವ್ಯಾಪಾರಸ್ಥರಿಗೆ ಬೆಂಬಲ ಉಪ ಘಟಕದಡಿ ಪುರಸಭಾ ವ್ಯಾಪ್ತಿಯಲ್ಲಿ 141 ಬೀದಿಬದಿ ವ್ಯಾಪಾರಸ್ಥರನ್ನು ಗುರುತಿಸಿತ್ತು. ಇವರ ಪೈಕಿ 118 ಮಂದಿಗೆ ಗುರುತಿನ ಚೀಟಿ ವಿತರಿಸಲಾಗಿತ್ತು. ಈಗ ಸಂಖ್ಯೆ ಜಾಸ್ತಿಯಾಗಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿದರೆ ಟ್ರಾಫಿಕ್ ಜಾಮ್ ಆಗುತ್ತದೆ.
ಬೀದಿಬದಿ ವ್ಯಾಪಾರಿಗಳ ಸರ್ವೇ ಮಾಡಲಾಗಿದ್ದು, ನಿರ್ದಿಷ್ಟ ಜಾಗ ಗುರುತಿಸಿ ವಲಯವನ್ನಾಗಿ ಗುರುತಿಸಲಾಗುತ್ತದೆ. ಜಾಗ ದೊರಕಿದರೆ ಅಲ್ಲಿ ಅವರಿಗೆ ವ್ಯಾಪಾರ ಮಾಡಲು ಅನುವು ಮಾಡಿಕೊಡಲಾಗುತ್ತದೆ. ಈ ಮೊದಲೇ ಗುರುತಿನ ಚೀಟಿ ಕೊಟ್ಟವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಕುರಿತು ಸಭೆಗಳನ್ನು ನಡೆಸಲಾಗುತ್ತಿದ್ದು, ಶೀಘ್ರ ಸಮಸ್ಯೆಗೆ ಪರಿಹಾರ ದೊರಕಲಿದೆ ಎನ್ನುತ್ತಾರೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್.