ಮಂಗಳೂರು: ಪ್ರಸವ ಪೂರ್ವ ಲಿಂಗ ಪತ್ತೆ ಮಾಡುವುದು ಮತ್ತು ಹೆಣ್ಣು ಭ್ರೂಣ ಹತ್ಯೆ ಮಾಡುವುದು ಕಾನೂನು ಬಾಹಿರ. ಆದ್ರೆ ಗಂಡು ಮಗು ಬೇಕೆನ್ನುವ ಇಚ್ಛೆ ಈ ಕೃತ್ಯ ಮುಂದುವರೆಯಲು ಕಾರಣವಾಗಿದೆ. ಹಿಂದುಳಿದ ಪ್ರದೇಶ, ಸಮುದಾಯವಲ್ಲದೇ ಅದೆಷ್ಟೋ ಕಡೆಗಳಲ್ಲಿ ಇನ್ನೂ ಕೂಡ ಲಿಂಗ ಪತ್ತೆ ಮಾಡುವುದರ ಜೊತೆಗೆ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿರುವುದು ದುರಂತವೇ ಸರಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ನೋಡೋಣ.
ಪ್ರಸವ ಪೂರ್ವ ಲಿಂಗ ಪತ್ತೆ - ಹೆಣ್ಣು ಭ್ರೂಣ ಹತ್ಯೆ ತಡೆಗೆ ಕ್ರಮ, ಜಿಲ್ಲಾ ಆರೋಗ್ಯಾಧಿಕಾರಿ ಪ್ರತಿಕ್ರಿಯೆ ಕೆಂಪು ಪಟ್ಟಿಯಲ್ಲಿದೆ ಜಿಲ್ಲೆ:
ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತದಲ್ಲಿ ಗಂಡಿನ ಸಂಖ್ಯೆ ಹೆಚ್ಚಳವಾಗಿ ಹೆಣ್ಣಿನ ಸಂಖ್ಯೆ ಕಡಿಮೆಯಿದೆ. 2011ರ ಜನಗಣತಿಯಂತೆ ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತ 1,00 ಗಂಡಿಗೆ 947 ಹೆಣ್ಣು ಇದೆ. ಈ ಅಸಮತೋಲನದಿಂದ ಜಿಲ್ಲೆಯನ್ನು ಕೆಂಪು ಪಟ್ಟಿಯಲ್ಲಿ ನಮೂದಿಸಲಾಗಿದೆ.
ಕಟ್ಟುನಿಟ್ಟಿನ ಕ್ರಮ:
ರಾಜ್ಯದ ಲಿಂಗಾನುಪಾತ 1,000 ಗಂಡು ಮಕ್ಕಳಿಗೆ 948 ಹೆಣ್ಣು ಇದ್ದರೆ, ದಕ್ಷಿಣ ಕನ್ನಡ ಜಿಲ್ಲೆಯ ಲಿಂಗಾನುಪಾತ 947 ಆಗಿದೆ. ಈ ಅಸಮತೋಲನ ಹೋಗಲಾಡಿಸಲು ಜಿಲ್ಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.
ಭ್ರೂಣಪತ್ತೆ ಕಾರ್ಯ:
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 148 ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳಿವೆ. ಆಸ್ಪತ್ರೆಗಳಲ್ಲಿ ಮತ್ತು ಪ್ರತ್ಯೇಕವಾಗಿ ಇರುವ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಯಾವುದೇ ಭ್ರೂಣಪತ್ತೆ ಕಾರ್ಯಗಳು ನಡೆಯುತ್ತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ರಾಮಚಂದ್ರ ಬಾಯರಿ ತಿಳಿಸಿದ್ದಾರೆ.
ಲಿಂಗಪತ್ತೆಗೆ ನಿರಾಕರಣೆ:
ಲಿಂಗಪತ್ತೆ ಮಾಡಲು ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್ಗಳು ನಿರಾಕರಿಸುತ್ತಿವೆ. ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಸೆಂಟರ್ಗಳ ತಪಾಸಣೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಅನಧಿಕೃತ ಸ್ಕ್ಯಾನಿಂಗ್ ಸೆಂಟರ್ಗಳು ಇಲ್ಲ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಸವ ಪೂರ್ವ ಲಿಂಗ ಪತ್ತೆ - ಹೆಣ್ಣು ಭ್ರೂಣ ಹತ್ಯೆ ಅಕ್ಷಮ್ಯ ಅಪರಾಧ: ಧಾರವಾಡದ ಪರಿಸ್ಥಿತಿಯೇನು?
ಲಿಂಗಾನುಪಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕೆಂಪುಪಟ್ಟಿಯಲ್ಲಿದೆ. 2011 ರ ಜನಗಣತಿಯ ವರದಿ ಬಳಿಕ ಲಿಂಗಪತ್ತೆ ತಡೆಯುವ ಬಗ್ಗೆ ಎಚ್ಚೆತ್ತುಕೊಂಡಿರುವ ಇಲಾಖೆ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಕೊರೊನಾ ಕಾರಣದಿಂದ 2021ಕ್ಕೆ ಆಗಬೇಕಾದ ಜನಗಣತಿ ವರದಿ 2022ಕ್ಕೆ ನಡೆಯಲಿರುವುದರಿಂದ ಆ ಸಂದರ್ಭದಲ್ಲಿ ಕೆಂಪು ಪಟ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆ ಹೊರಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.