ಮಂಗಳೂರು: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಸೇವೆ ನೀಡಲು ಭಕ್ತರಿಗಾಗಿ ಯಾವುದೇ ಪಟ್ಟಿ ಇರುವುದಿಲ್ಲ. ಕಾಣಿಕೆ ನೀಡಲು ಡಬ್ಬಿ ಇರುತ್ತದೆ. ಬಡಜನರಿಗೆ ಮನೆ ಕಟ್ಟಿ ಕೊಡುವುದೇ ಶ್ರೀರಾಮ ದೇವರಿಗೆ ಮಾಡುವ ಸೇವೆ ಎಂದು ಮಂದಿರ ನಿರ್ಮಾಣ ಟ್ರಸ್ಟ್‌ನ ಸದಸ್ಯ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಇಂದು ಮಾತನಾಡಿದ ಅವರು, "ರಾಮ ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಜನವರಿ 18, 19, 20ರಂದು ಧಾರ್ಮಿಕ ವಿಧಿವಿಧಾನ ನಡೆಯುತ್ತದೆ. ಜ.21ಕ್ಕೆ ಪ್ರಾಣ ಪ್ರತಿಷ್ಠೆಗೆ ಬೇಕಾದ ಪೂರ್ವ ತಯಾರಿ ನಡೆಯುತ್ತದೆ. ಜ.22ರಂದು ಪ್ರಾಣ ಪ್ರತಿಷ್ಠೆ, ಪ್ರಧಾನಮಂತ್ರಿಗಳಿಂದ ಲೋಕಾರ್ಪಣೆ ನಡೆಯಲಿದೆ. ಮಂದಿರದಲ್ಲಿ ಅಲ್ಲಿನ ರಾಮನಂದ ಸಂಪ್ರದಾಯದಂತೆ ಪೂಜೆ ನಡೆಯುತ್ತಿದೆ. ಅದು ಮುಂದುವರಿದು ವೇದೋಕ್ತ, ಶಾಸ್ತ್ರೋಕ್ತವಾದ ಪೂಜೆಗಳು ನಡೆಯುತ್ತದೆ" ಎಂದರು.
"ಇತರ ಅನೇಕ ದೇವಾಲಯಗಳಲ್ಲಿ ಇರುವಂತೆ ಸೇವಾ ಲಿಸ್ಟ್ ಅಯೋಧ್ಯೆ ಮಂದಿರದಲ್ಲಿ ಇರುವುದಿಲ್ಲ. ಸೇವೆ ಮಾಡುವವರು ರಾಮ ದೇವರ ದೇಶಪ್ರೇಮದಂತೆ ಮಾಡಬೇಕು. ದೇಶ ಸೇವೆ ಮತ್ತು ರಾಮ ಸೇವೆ ಬೇರೆಯಲ್ಲ. ರಾಮ ಸೇವೆ ಮಾಡಬೇಕು ಎಂಬ ಬಯಕೆ ಇರುವವರು ದೇಶ ಸೇವೆ ಮಾಡಬೇಕು. ರಾಮನಿಗೆ ಮನೆ ಆಯಿತು. ಇನ್ನು ರಾಮ ರಾಜ್ಯದ ಕನಸು ನನಸಾಗಾಬೇಕು. ರಾಮ ರಾಜ್ಯದಲ್ಲಿ ದುರ್ಭಿಕ್ಷೆ ಇರಬಾರದು. ಎಲ್ಲಿಯೂ ದುಃಖ ಅಶಾಂತಿ ಇರಬಾರದು."
"ನಮ್ಮ ಸುತ್ತಮುತ್ತ ಇರುವ ದುರ್ಬಲರಿಗೆ ಮನೆ ಕಟ್ಟಿ ಕೊಡುವ ಸಂಕಲ್ಪ ಮಾಡಬೇಕು. ಒಬ್ಬರಿಂದ ಆಗದಿದ್ದರೆ ಸೇರಿ ಮಾಡಬೇಕು. ಮುಂದಿನ ದಿನಗಳಲ್ಲಿ ಇದನ್ನು ಅಭಿಯಾನವಾಗಿ ಮಾಡಲಿದ್ದೇವೆ. ಜಿಲ್ಲೆ ಜಿಲ್ಲೆಗಳಲ್ಲಿ ಸಮಿತಿ ಮಾಡಿ ಡೊನೇಷನ್ ಪಡೆಯದೆ ದುರ್ಬಲರನ್ನು ಗುರುತಿಸಿ ಮನೆ ನಿರ್ಮಾಣ ಮಾಡುವುದು. ಮನೆ ಇಲ್ಲದವರಿಗೆ ಮನೆ ಮಾಡಿ ಕೊಟ್ಟು ರಾಮ ಮಂದಿರಕ್ಕೆ ತೆರಳಿ ನಿನಗೆ ಸಮರ್ಪಿತ ಎಂದುಕೊಳ್ಳುವುದೇ ರಾಮನಿಗೆ ನೀಡುವ ಸೇವೆ ಆಗುತ್ತದೆ. ಅದಕ್ಕಾಗಿ ರಾಮರಾಜ್ಯ ವೆಬ್ ಸೈಟ್, ಆ್ಯಪ್ ಮಾಡಲಾಗುತ್ತದೆ. ಅದರಲ್ಲಿ ಈ ಸೇವೆ ಮಾಡಿದವರು ನೋಂದಾಯಿಸಿದರೆ ಅದರ ಲೆಕ್ಕ ಸಿಗುತ್ತದೆ. ಹುಂಡಿ ಡಬ್ಬಿ ಇರುತ್ತದೆ. ಅದಕ್ಕೆ ಕಾಣಿಕೆ ಹಾಕಬಹುದು" ಎಂದು ಶ್ರೀಗಳು ಹೇಳಿದರು.
ಕಾಮಾಲೆ ಕಣ್ಣಿಗೆ ಕಾಣೋದೆಲ್ಲ ಹಳದಿ: ವಿಪಕ್ಷಗಳಲ್ಲಿ ಕೆಲವು ಪಕ್ಷಗಳು ರಾಮಮಂದಿರ ಉದ್ಘಾಟನೆಯ ಆಹ್ವಾನ ತಿರಸ್ಕರಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, "ಕರೆಯದಿದ್ದರೆ ಕರೆದಿಲ್ಲ ಎಂದು ಆಕ್ಷೇಪ, ಕರೆದರೆ ತಿರಸ್ಕರಿಸುತ್ತೇವೆ ಎಂಬ ಹೆಗ್ಗಳಿಕೆ. ರಾಮ ಭಾರತೀಯರಿಗೆ ಎಲ್ಲರಿಗೂ ಸೇರಿದವನು. ಯಾರಿಗೆ ಬರಬೇಕೆಂಬ ಆಪೇಕ್ಷೆಯಿದೆಯೋ ಅವರು ಬರಬಹುದು. ಆಹ್ವಾನ ಇಲ್ಲದೆಯೂ ಬರಬಹುದು. ರಾಜಕೀಯ ಇದೆ ಎಂಬುದು ಕಾಮಾಲೆ ಕಣ್ಣಿಗರಿಗೆ ಹಳದಿ ಕಂಡಂತೆ" ಎಂದರು.
"ಹಿರಿಯ ಶ್ರೀಗಳು ಈ ವೈಭವ ನೋಡಲು ಇರಬೇಕಿತ್ತು. ಅದರೆ ದೈವ ವಿಧಿ ಬೇರೆ ಇತ್ತು. ಗುರುಗಳು ಸೇರಿದಂತೆ ಎಲ್ಲರೂ ಶ್ರಮಿಸಿದ್ದಾರೆ. ಅಯೋಧ್ಯೆ ರಾಮಮಂದಿರ ಎಲ್ಲರಿಗೂ ಮುಕ್ತವಾಗಿದೆ. ಉದ್ಘಾಟನೆಯ ಮರುದಿನವೇ ಭಕ್ತರು ಬರಬಹುದು" ಎಂದರು. ಕೆಲವು ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಅಯೋಧ್ಯೆಯಲ್ಲಿ 7 ಸಾವಿರ ಮಂದಿಗೆ ಆಹ್ವಾನ ನೀಡಬಹುದು. ಪ್ರಾತಿನಿಧ್ಯ ಇಟ್ಟುಕೊಂಡು ಆಹ್ವಾನ ಮಾಡಲಾಗಿದೆ" ಎಂದರು.
ಇದನ್ನೂ ಓದಿ:ಶತಶತಮಾನಗಳ ಹೋರಾಟದ ಫಲವಾಗಿ ಕಾನೂನು ಬದ್ದವಾಗಿ ರಾಮಮಂದಿರ ನಿರ್ಮಾಣ: ಪೇಜಾವರ ಶ್ರೀ