ಮಂಗಳೂರು: ಉಳ್ಳಾಲದ ಬಟಪಾಡಿಯಲ್ಲಿ ಅರಬ್ಬಿ ಸಮುದ್ರದಲ್ಲಿ ಜೂನ್ 21ರಂದು ಮುಳುಗಡೆಯಾದ ಎಂವಿ ಪ್ರಿನ್ಸೆಸ್ ಮಿರಾಲ್ ಹಡಗಿನಲ್ಲಿ ಇದುವರೆಗೆ ಯಾವುದೇ ರೀತಿಯ ತೈಲ ಸೋರಿಕೆ ಕಂಡು ಬಂದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
8000 ಟನ್ ಉಕ್ಕಿನ ಕಾಯಿಲ್ಗಳನ್ನು ತುಂಬಿಸಿಕೊಂಡು ಚೀನಾದ ಟಿಯಾಂಜಿನ್‌ನಿಂದ ಹೊರಟ ಎಂವಿ ಪ್ರಿನ್ಸಸ್ ಮಿರಾಲ್ ಹಡಗು ಲೆಬನಾನ್‌ಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಮಂಗಳೂರಿನ ಬಟ್ಟಪ್ಪಾಡಿ ಸಮೀಪದ ಸಮುದ್ರದಲ್ಲಿ ಮುಳುಗಡೆಗೊಂಡಿದೆ.
ಪ್ರಿನ್ಸೆಸ್ ಮಿರಾಲ್ ಸರಕು ಸಾಗಾಟದ ಹಡಗಿನಲ್ಲಿ 150 ಮೆಟ್ರಿಕ್ ಟನ್ ತೈಲ ಇದ್ದು, ತೈಲ ಸೋರಿಕೆಯಾಗುವುದನ್ನು ತಡೆಯಲು ಪ್ರಯತ್ನ ಮಾಡಲಾಗುತ್ತಿದೆ. ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯಲು ಗುಜರಾತ್ನ ಪೋರ ಬಂದರಿನಿಂದ 'ಸಮುದ್ರ ಪಾವಕ್' ಎಂಬ ವಿಶೇಷ ತಂತ್ರಜ್ಞ ಹಡಗು ಕೂಡ ಕಾರ್ಯನಿರ್ವಹಿಸುತ್ತಿದೆ. ಕೋಸ್ಟ್ ಗಾರ್ಡ್ ನೌಕೆ, 9 ಹಡಗುಗಳು, 3 ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಗಳು ನಿಗಾ ಇರಿಸಿದೆ.
ಹಡಗಿನ ಡರ್ಟಿ ವಾಟರ್ ಟ್ಯಾಂಕ್‌ನಿಂದ ಸಣ್ಣ ಪ್ರಮಾಣದ ಸೋರಿಕೆ ನಿನ್ನೆ ಆರಂಭವಾಗಿದೆ ಎಂದು ನಿನ್ನೆ ತಿಳಿಸಲಾಗಿತ್ತು. ಆದರೆ, ತೈಲ ಟ್ಯಾಂಕ್‌ನಿಂದ ಸೋರಿಕೆಯಾಗುತ್ತಿರುವುದು ಕಂಡು ಬಂದಿಲ್ಲ. ಕರಾವಳಿ ರಕ್ಷಣಾ ಪಡೆಗೆ ಸೇರಿದ ಮೂರು ವಿಶೇಷ ನೌಕೆ ಅಲ್ಲದೆ ಡೋರ್ನಿಯರ್ ವಿಮಾನದ ಮೂಲಕವೂ ಈ ಬಗ್ಗೆ ನಿರಂತರ ಸಮೀಕ್ಷೆ ನಡೆಸಲಾಗುತ್ತಿದೆ. ಸಮುದ್ರದಲ್ಲಿ ತೈಲ ಸೋರಿಕೆಯಾದಲ್ಲಿ ನಿವಾರಣಾ ಕ್ರಮಗಳು, ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸುರಕ್ಷತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ವಿಶೇಷ ಕ್ರಮಗಳ ಬಗ್ಗೆ ಚರ್ಚೆ:ನೌಕಾಯಾನ ಇಲಾಖೆಯ ಮಹಾನಿರ್ದೇಶಕರು, ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿ ಹಾಗೂ ಪಶ್ಚಿಮ ಕಚೇರಿಗಳು, ಜಿಲ್ಲಾಧಿಕಾರಿ ಕಚೇರಿ, ಎಂಎಂಡಿ ಇಲಾಖೆಯ ಅಧಿಕಾರಿಗಳು, ನವಮಂಗಳೂರು ಬಂದರು ಪ್ರಾಧಿಕಾರ, ಸಂಬಂಧಿಸಿದರು ಹಾಗೂ ಹಡಗಿನ ಮಾಲೀಕರೊಂದಿಗೆ ಈ ಸಮಸ್ಯೆಯನ್ನು ಬಗೆಹರಿಸಲು ಕೈಗೊಳ್ಳಬೇಕಾದ ವಿಶೇಷ ಕ್ರಮಗಳ ಬಗ್ಗೆ ಚರ್ಚಿಸಲಾಗಿದೆ.
ಹಡಗಿನ ತೆರವಿಗೆ ಏಜೆನ್ಸಿಗಳನ್ನು ನಿಯೋಜಿಸುವ ಬಗ್ಗೆ ನೌಕಾಯಾನ ಇಲಾಖೆಯ ಮಹಾನಿರ್ದೇಶಕರು ಕ್ರಮವಹಿಸುವರು. ಈ ಸಂದರ್ಭದಲ್ಲಿ ವಹಿಸಬೇಕಾದ ವಿಶೇಷ ಕ್ರಮಗಳ ಬಗ್ಗೆ ತಾಂತ್ರಿಕ ಪರಿಣತರು ಜಿಲ್ಲಾಡಳಿತಕ್ಕೆ ಮಾರ್ಗದರ್ಶನ ನೀಡುತ್ತಿದ್ದು, ಅದರಂತೆಯೂ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಡಗಿಗೆ ಸಂಬಂಧಿತ ವಿಷಯ ಹಾಗೂ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನೌಕಾಯಾನ ಇಲಾಖೆಯ ಮಹಾನಿರ್ದೇಶಕರು, ಕರಾವಳಿ ರಕ್ಷಣಾ ಪಡೆ, ಎನ್‌ಎಂಪಿಎ, ಎಂಆರ್‌ಪಿಎಲ್ ಸೇರಿದಂತೆ ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಗಳು ಪ್ರತಿದಿನ ಸಂಜೆ 5 ಗಂಟೆಗೆ ವರ್ಚುವಲ್ ಮಾಧ್ಯಮದ ಮೂಲಕ ಸಭೆ ನಡೆಸಲಾಗುತ್ತಿದೆ. ಪರಿಸ್ಥಿತಿಗೆ ತಕ್ಕಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಕುಮಾರಸ್ವಾಮಿ ಎಂದರೇ ಲಾಟರಿ ಮುಖ್ಯಮಂತ್ರಿ, ಜೆಡಿಎಸ್ಗೆ ಇನ್ನು ಬಿಜೆಪಿ ಬೆಂಬಲವಿಲ್ಲ: ಆರ್.ಅಶೋಕ್