ಮಂಗಳೂರು: ರಾಜ್ಯದ 25 ಲೋಕಸಭಾ ಸದಸ್ಯರಲ್ಲಿ ಓರ್ವನಿಗೂ ಕೇಂದ್ರದೊಡನೆ ನೇರವಾಗಿ ದೂರವಾಣಿ ಮೂಲಕ ಮಾತನಾಡುವ ಸಾಮರ್ಥ್ಯ, ಚೈತನ್ಯ ಶಕ್ತಿಯಿಲ್ಲ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಲೇವಡಿ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಇನ್ನಾದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಜಿಲ್ಲೆಯ ರಾಜ್ಯದ ಸಾಮಾನ್ಯ ವರ್ಗದ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಒಳನಾಡು ಮೀನುಗಾರಿಕೆ ನಡೆಸುವವರ ಪರಿಸ್ಥಿತಿ ಬಹಳ ಸಂಕಷ್ಟದಲ್ಲಿದೆ. ಆರು ತಿಂಗಳಿಗೊಂದು ಊರೆಂದು ಸುತ್ತಾಡಿಕೊಂಡು ಬದುಕು ಸಾಗಿಸುತ್ತಿರುತ್ತಾರೆ. ಗುತ್ತಿಗೆದಾರರು ಹಿಂದೆ ದೊಡ್ಡ ದೊಡ್ಡ ದೊಡ್ಡ ಜಲಾಶಯಗಳನ್ನು ಗುತ್ತಿಗೆ ಪಡೆಯುತ್ತಿದ್ದರು. ಇಂತಹ ಅಲೆಮಾರಿ ಜನರಿಗೆ ಶಕ್ತಿ ತುಂಬುವ ಕೆಲಸ ಆಗಬೇಕೆಂದು ಸಿದ್ದರಾಮಯ್ಯ ಸಿಎಂ ಆಗಿರುವಾಗ ಜಲಾಶಯಗಳನ್ನು ಗುತ್ತಿಗೆ ಪಡೆಯುವುದನ್ನು ಬೇರ್ಪಡಿಸಿ ಹಿಂದುಳಿದ ಮೀನುಗಾರ ಕುಟುಂಬಗಳಿಗೆ ಅದನ್ನು ಲೀಸ್ ಮೂಲಕ ಕೊಡುವ ವ್ಯವಸ್ಥೆ ಮಾಡಿದ್ದರು. ಇಂದಿನ ಸರ್ಕಾರವೂ ಇಂತಹ ಒಳನಾಡು ಮೀನುಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು ಎಂದರು.
ಅದೇ ರೀತಿ ಬೀಡಿ, ಅಗರಬತ್ತಿ, ಆಟೊರಿಕ್ಷಾ, ಟೈಲರ್, ಫೋಟೋಗ್ರಾಫರ್ ವೃತ್ತಿಯಲ್ಲಿರುವವರ ಬದುಕು ಕೋವಿಡ್ ನಿಂದಾಗಿ ಕಷ್ಟದಾಯಕವಾಗಿದೆ. ಆದರೆ ಸರ್ಕಾರ ಇವರಿಗೆ ಯಾವುದೇ ಪರಿಹಾರ ಘೋಷಣೆ ಮಾಡಿಲ್ಲ. ದುಡಿಯುವ ವರ್ಗ ಕೆಲಸವಿಲ್ಲದೇ ತತ್ತರಿಸಿ ಹೋಗಿದೆ. ಅವರ ಬದುಕಿಗೆ ಶಕ್ತಿ ತುಂಬುವ ಕಾರ್ಯ ಸರ್ಕಾರದ ಕಡೆಯಿಂದ ಆಗಬೇಕಿದೆ. ಇದು ನಮ್ಮ ಕಳಕಳಿಯ ವಿನಂತಿ ಎಂದು ಅವರು ಹೇಳಿದರು.