ಬೆಳ್ತಂಗಡಿ:ಸರ್ಕಾರಗಳು ಗ್ರಾಮೀಣ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅದೆಷ್ಟೋ ಯೋಜನೆಗಳನ್ನು ಜಾರಿಗೊಳಿಸಿದರೂ ಕೆಲವು ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಬಡ ಜನರು ಹಲವು ದಿನಗಳಿಂದ ನೀರಿಗಾಗಿ ಪರದಾಡುವಂತಾಗಿದೆ. ತಮಗೆ ಸಿಗಬೇಕಾದ ಮೂಲ ಹಕ್ಕಿಗಾಗಿ ಹೋರಾಟ ಮಾಡುವಂತಾಗಿದೆ.
ಮೂಲ ಸೌಕರ್ಯ ವಂಚಿತ ನೇಜಿಕಾರು ಜನತೆ ಇದು ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಜಿಕಾರು ಪೆರ್ಲಾಪು ಪರಿಸರದ ಜನರ ಸ್ಥಿತಿ. ಎರಡು ವಾರಕ್ಕೊಮ್ಮೆ ನಲ್ಲಿಯಲ್ಲಿ ಕೇವಲ ಅರ್ಧ ಗಂಟೆ ಅಥವಾ ಹೆಚ್ಚೆಂದರೆ ಒಂದು ಗಂಟೆಗಳ ಕಾಲ ನೀರು ಬರುತ್ತದೆ. ಬರುವ ನೀರು ಶುದ್ಧವಾಗಿಲ್ಲ. ಕೆಸರಿನಂತೆ ಕೆಂಪು ಕೆಂಪಾಗಿರುತ್ತೆ. ಕುಡಿಯೋದಕ್ಕೂ ಯೋಗ್ಯವಾಗಿಲ್ಲ. ಸ್ನಾನ ಮಾಡಲು ಬಳಸಿದರೆ ಚರ್ಮ ರೋಗಗಳು ಬರುತ್ತಿವೆ. ಈ ನೀರನ್ನು ಶೌಚಾಲಯಕ್ಕೂ ಬಳಸಲು ಸಾಧ್ಯವಿಲ್ಲ. ಆದ್ದರಿಂದ ಬಯಲು ಶೌಚಾಲಯವನ್ನೇ ಅವಲಂಬಿಸಬೇಕಾಗುವ ದಿನ ದೂರವಿಲ್ಲ. ಕುಡಿಯುವ ನೀರಿಗೆ ಊರಿನ ಜನ ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾದಿಂದಲಾದರೂ ಬದುಕಬಹುದು, ಕೊಳಚೆ ನೀರನ್ನು ಕುಡಿದರೆ ನರಳಿ ಸಾಯುವ ದಿನ ದೂರವಿಲ್ಲ ಎನ್ನುತ್ತಾರೆ ಈ ಪ್ರದೇಶದ ಜನ.
ನೇಜಿಕಾರು ಬಳಿಯ ಪೆರ್ಲಾಪು ಜನರಿಗೆ ಇಳಂತಿಲ ಗ್ರಾಮ ಪಂಚಾಯತ್‍ನಿಂದ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಉಪ್ಪಿನಂಗಡಿಯ ನೇತ್ರಾವತಿ ನದಿಯಿಂದ ಪೆರ್ಲಾಪಿಗೆ ಟ್ಯಾಂಕ್ ನೀರು ಹರಿದು ಬರಬೇಕಿದ್ದು, ಸಮರ್ಪಕವಾಗಿ ನೀರು ಪೂರೈಕೆಯಾಗದೆ ಸ್ಥಳೀಯ ಜನತೆ ಹೈರಾಣಾಗಿದ್ದಾರೆ. ಕುಡಿಯುವ ನೀರು ಬಿಡಿ, ಇತರ ದೈನಂದಿನ ಚಟುವಟಿಕೆಗಳಿಗೂ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪರಿಶಿಷ್ಟ ವರ್ಗದವರ ಕಾಲೋನಿ ಇದಾಗಿದ್ದರೂ ಅಧಿಕಾರಿಗಳಿಂದ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ ಎಂಬುದು ಗ್ರಾಮಸ್ಥರ ಆರೋಪ.
ಉಪ್ಪಿನಂಗಡಿ ನದಿಗೆ ಕೋಳಿ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ಬಿಡಲಾಗುತ್ತಿದೆ. ಗ್ರಾಮ ಪಂಚಾಯತ್‍ಗೆ ಈ ಬಗ್ಗೆ ಅರಿವಿದ್ದರೂ ಅದೇ ನೀರನ್ನು ಸ್ವಚ್ಛಗೊಳಿಸದೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಸ್ಥಳೀಯ ಜನತೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳೇ ನೇರ ಹೊಣೆ ಎಂದು ಪೆರ್ಲಾಪು ಜನರು ಆರೋಪಿಸಿದ್ದಾರೆ.
ಕೆಸರು ತುಂಬಿದ್ದ ಟ್ಯಾಂಕ್ ಸ್ವಚ್ಛತೆ:ಕುಡಿಯುವ ನೀರು ಸಮರ್ಪಕವಾಗಿ ದೊರೆಯದೆ, ಕೊಳಚೆ ನೀರು ಬರುವುದನ್ನು ಗಮನಿಸಿ ಸ್ಥಳೀಯರು, ಜನಪ್ರತಿನಿಧಿಗಳು ಹಾಗೂ ಗ್ರಾ.ಪಂ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಲಿಲ್ಲ. ಗ್ರಾ.ಪಂ ಅಧಿಕಾರಿಗಳು ನೀರು ಸಂಗ್ರಹ ಮಾಡುವ ಓವರ್ ಹೆಡ್ ಟ್ಯಾಂಕ್ ಸ್ವಚ್ಛಗೊಳಿಸಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದನ್ನು ಗಮನಿಸಿದ ಸ್ಥಳೀಯರು ತಾವೇ ಸ್ವಚ್ಛಗೊಳಿಸುವುದಾಗಿ ತಿಳಿಸಿದರು. ಟ್ಯಾಂಕ್‍ಗೆ ಇಳಿದಾಗ ಸುಮಾರು ಅರ್ಧ ಅಡಿಗಳಷ್ಟು ಕೆಸರು ತುಂಬಿಕೊಂಡಿತ್ತು. ಈ ಕೆಸರು ತೆಗೆದು ಸ್ವಚ್ಛತೆಯನ್ನೂ ತಾವೇ ಮಾಡಿದರು. ಸ್ವಚ್ಛತೆಗೆ ಗ್ರಾ.ಪಂ. ಸಂಬಳವನ್ನೇನೋ ನೀಡಿತು. ಆದರೆ ಈ ಊರಿನ ಜನರ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ.
ಉಪ್ಪಿನಂಗಡಿ ಕಡವಿನ ಬಾಗಿಲು ಬಳಿಯಿಂದ ಟ್ಯಾಂಕ್‍ಗೆ ಹೋಗಿ 4 ಕಿ.ಮೀ. ದೂರದಿಂದ ನೀರು ಬರಬೇಕು. ಈ ಸಂದರ್ಭ ಹಲವು ಗೇಟ್ ವಾಲ್‍ಗಳನ್ನು, ಸಾವಿರಾರು ಮನೆಗಳನ್ನು ದಾಟಿ ನೀರು ಈ ನೇಜಿಕಾರು, ಪೆರ್ಲಾಪು ಬಳಿ ಬರಬೇಕಿದೆ. ಈ ಭಾಗಕ್ಕೆ ನೀರು ಬಿಡುವ ಸಮಯ ನಿಗದಿಪಡಿಸಿಲ್ಲ. ಸ್ಥಳೀಯರೇ ಹೋಗಿ ಗೇಟ್ ವಾಲ್ ಬಿಟ್ಟು ನೀರು ಬಿಡಬೇಕಿದೆ. ಸುಮಾರು ಒಂದು ಗಂಟೆಗಳಷ್ಟು ಕಾಲ ಬರುವ ನೀರನ್ನು ಇರುವ ಅಷ್ಟೂ ಮನೆಯವರು ಹಂಚಿಕೊಂಡು ಬಳಸಬೇಕಿದೆ. ಇನ್ನಾದರೂ ಶಾಸಕರು, ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿ ಈ ಭಾಗದ ಜನರು ಆಗ್ರಹಿಸಿದ್ದಾರೆ.