ಮಂಗಳೂರು: ಕೊರೋನಾ ವೈರಸ್ ಬಗ್ಗೆ ಭೀತಿ ಬೇಡ, ತಪ್ಪು ಸಂದೇಶಗಳಿಗೆ ಕಿವಿ ಕೊಡದಿರಿ, ವೈದ್ಯರ ಸಲಹೆಗಳಿಲ್ಲದೆ ಯಾವುದೇ ಸಾಮಾಜಿಕ ಜಾಲತಾಣಗಳ ಮಾಹಿತಿ ಪರಿಗಣಿಸದಿರಿ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ತಿಳಿಸಿದ್ದಾರೆ.
ಕೊರೋನಾ ಸೋಂಕಿನ ಬಗ್ಗೆ ಭಯ ಬೇಡ: ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ - Corona infection
ಸಾಮಾನ್ಯ ಫ್ಲೂ ಹರಡುವ ರೀತಿಯಲ್ಲಿಯೇ ಕೊರೋನಾ ಸೋಂಕು ಹರಡುತ್ತದೆ. ಸೋಂಕಿತರು ಕೆಮ್ಮಿದಾಗ, ಸೀನಿದಾಗ ಈ ವೈರಸ್ ಹರಡುತ್ತದೆ. ಸ್ವಚ್ಛತೆ ಇಲ್ಲದೆ ಮೂಗು, ಬಾಯಿಗಳನ್ನು ಮುಟ್ಟುವುದರಿಂದ ಈ ಸೋಂಕು ಹರಡುತ್ತದೆ ಎಂದು ಮಂಗಳೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಮಾಹಿತಿ ನೀಡಿದ್ದಾರೆ.
ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಮಾತನಾಡಿದ ಅವರು, ತೀವ್ರ ಜ್ವರ, ನೆಗಡಿ, ಕೆಮ್ಮು, ಉಸಿರಾಟದ ತೊಂದರೆ ಹಾಗೂ ಭೇದಿ ಕೊರೋನಾ ಸೋಂಕಿನ ಲಕ್ಷಣಗಳು. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ರೋಗಿಯ ಮೂಗು, ಗಂಟಲಿನ ಸ್ರಾವದ ಲೇಪನ ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿ ದೃಢಪಡಿಸಲಾಗುವುದು. ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಡ್ಡ ಹಿಡಿಯುವ ಮೂಲಕ ಮತ್ತು ಕೈಯನ್ನು ಚೆನ್ನಾಗಿ ತೊಳೆದು ಆಹಾರ ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಇನ್ನು ಕೆಮ್ಮು, ಸೀನು ಮುಂತಾದ ಅನಾರೋಗ್ಯ ಪೀಡಿತರ ಸಂಪರ್ಕದಿಂದ ದೂರ ಇರುವ ಹಾಗೆ ನೋಡಿಕೊಳ್ಳುವುದು. ಇದು ಪ್ರಾಣಿಗಳಿಂದ ಹರಡುವ ಕಾರಣ ಪ್ರಾಣಿಗಳ ನೇರ ಸಂಪರ್ಕವನ್ನು ಮಾಡವುದು ಬೇಡ. ಬೇಯಿಸದ ಮಾಂಸದ ಆಹಾರ ಸೇವಿಸದಿರಿ ಎಂದು ಡಾ.ರಾಮಕೃಷ್ಣ ರಾವ್ ಸಾರ್ವಜನಿಕರಿಗೆ ಸಲಹೆ ನೀಡಿದರು.