ಮಂಗಳೂರು :ಯಕ್ಷಗಾನವೆಂದರೆ ರಾತ್ರಿ ಪೂರ್ತಿ ನಡೆಯುವ ಜನಪದ ಕಲಾಪ್ರಕಾರ. ಯಕ್ಷಗಾನದ ರಾಕ್ಷಸ, ದೇವತೆ, ಇನ್ನಿತರ ವೇಷಗಳನ್ನು ರಾತ್ರಿಯ ಕಾಲದಲ್ಲಿಯೇ ನೋಡಲು ಚಂದ. ಆದರೆ, ಕೊರೊನಾ ಸೋಂಕಿನ ಪ್ರಭಾವ ಈ ಯಕ್ಷಗಾನದ ಮೇಲೆಯೂ ಬಿದ್ದಿದೆ. 10 ದಿನಗಳ ನೈಟ್ ಕರ್ಫ್ಯೂವಿನಿಂದಾಗಿ ಯಕ್ಷಗಾನ ಮೇಳಗಳು ತಮ್ಮ ಪ್ರದರ್ಶನ ಸಮಯದಲ್ಲಿ ಬದಲಾವಣೆ ಮಾಡಿವೆ.
ಮಾಮೂಲಿ ಯಕ್ಷಗಾನ ಪ್ರದರ್ಶನವಿದ್ದಲ್ಲಿ ರಾತ್ರಿ 9.30ಕ್ಕೆ ಆರಂಭವಾಗಿ ಬೆಳಗ್ಗೆ 6ರವರೆಗೆ ಇರುತ್ತದೆ. ಕಾಲಮಿತಿಯಾದಲ್ಲಿ ಸಂಜೆ 7 ಗಂಟೆಯಿಂದ ನಡುರಾತ್ರಿ 1ರವರೆಗೆ ಪ್ರದರ್ಶನವಾಗುತ್ತದೆ. ಆದರೆ, ಇದೀಗ ಒಮಿಕ್ರಾನ್ ಭೀತಿಯಿಂದ ರಾಜ್ಯ ಸರಕಾರ ಇಂದಿನಿಂದ ಜ.7ರವರೆಗೆ ರಾತ್ರಿ ಕರ್ಫ್ಯೂ ವಿಧಿಸಿದೆ.
ಪರಿಣಾಮ ಯಕ್ಷಗಾನ ಪ್ರದರ್ಶನವನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಯಕ್ಷಗಾನವನ್ನು ರದ್ದು ಮಾಡದೆ ಮಧ್ಯಾಹ್ನ 3.30ರಿಂದ ರಾತ್ರಿ 9.30ರವರೆಗೆ ಸಮಯ ಬದಲಾವಣೆ ಮಾಡಿ ಪ್ರದರ್ಶನ ಮಾಡಲಾಗುತ್ತಿದೆ.