ಬಂಟ್ವಾಳ: ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಭಾನುವಾರ ಸಂಜೆ ದಾಳಿ ನಡೆಸಿದ್ದಾರೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ಸಂದರ್ಭದಲ್ಲಿ ಗಲಭೆ ಸೃಷ್ಟಿಸಿ, ವಿಧ್ವಂಸಕ ಕೃತ್ಯ ಎಸಗಲು ಹಣಕಾಸಿನ ನೆರವು ಒದಗಿಸಿರಬಹುದು ಎಂಬ ಗುಮಾನಿಯ ಮೇರೆಗೆ ಬಂಟ್ವಾಳ ಮೂಲದ ನಾಲ್ವರು ಆರೋಪಿಗಳ ಮನೆಗಳಿಗೆ ತೆರಳಿದ ಅಧಿಕಾರಿಗಳು ದಾಖಲೆಗಳನ್ನು ಶೋಧಿಸಿದ್ದಾರೆ.
ಕಳೆದ ವರ್ಷ ಪಾಟ್ನಾದಲ್ಲಿ ನಡೆದ ಮೋದಿ ಕಾರ್ಯಕ್ರಮವನ್ನು ವಿಫಲಗೊಳಿಸಲು ಸಂಚು ನಡೆಸಿರುವವರ ಜೊತೆ ಈ ನಾಲ್ವರು ಸಂಪರ್ಕ ಹೊಂದಿದ್ದು, ಹಣಕಾಸು ನೆರವು ಒದಗಿಸಿದ್ದಾರೆ ಎಂಬ ಆರೋಪದಡಿ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಕೃತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪವೂ ಸಹ ಇವರ ಮೇಲಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ, ದುಬೈನಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬ ನಡೆಸುತ್ತಿರುವ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಮೆಲ್ಕಾರ್ನಲ್ಲಿ ಅಂಗಡಿ ವ್ಯವಹಾರ ನಡೆಸಿಕೊಂಡಿರುವ ಈ ನಾಲ್ವರು ಸಹಾಯ ಮಾಡಿದ್ದಾರೆ ಎಂಬ ಸಂಶಯ ಸಹ ವ್ಯಕ್ತವಾಗಿದೆ.
ಇದನ್ನೂ ಓದಿ:ಐಎಸ್ಡಿ-ಎನ್ಐಎ ಭರ್ಜರಿ ಕಾರ್ಯಾಚರಣೆ.. ಅಲ್ ಖೈದಾ ಜೊತೆ ನಂಟು, ಬೆಂಗಳೂರಿನಲ್ಲಿ ಶಂಕಿತ ಅರೆಸ್ಟ್
ಇನ್ನು ರಾಷ್ಟ್ರೀಯ ತನಿಖಾ ದಳದ ದಾಳಿ ವೇಳೆ ಬಂಟ್ವಾಳ ಪೊಲೀಸರು ಮತ್ತು ಕೆಎಸ್ಆರ್ಪಿಯ ಮೂರು ಬಸ್ ಪೊಲೀಸರು ಹಾಜರಿದ್ದರು. ಇಡೀ ನಂದಾವರಕ್ಕೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಕಳೆದ ವರ್ಷವೂ ಸಹ ಬಂಟ್ವಾಳದ ಬಿ.ಸಿ.ರೋಡ್ನಲ್ಲಿದ್ದ ಮುಖಂಡರೊಬ್ಬರ ಮನೆ ಮೇಲೆ ಎನ್‌ಐಎ ದಾಳಿ ನಡೆಸಿ, ಬಿಹಾರದ ಘಟನೆಗೆ ಸಂಬಂಧಿಸಿದಂತೆ ವಿವರಗಳನ್ನು ಪಡೆದುಕೊಂಡಿತ್ತು. ಇದೀಗ ನಂದಾವರದ ವ್ಯಕ್ತಿಯೊಬ್ಬರು ಹಣಕಾಸಿನ ನೆರವು ನೀಡಿದ ಮೂಲ ಹಾಗೂ ವಿವರಗಳನ್ನು ಪಡೆದುಕೊಳ್ಳಲು ದಾಳಿ ನಡೆದಿದ್ದು, ಮೂವರ ವಿಚಾರಣೆ ನಡೆಸಲಾಗಿದೆ. ಇವರಲ್ಲಿ ಒಬ್ಬರು ದುಬೈನಲ್ಲಿ ವ್ಯವಹಾರ ಮಾಡಿಕೊಂಡಿದ್ದು, ಇತ್ತೀಚೆಗಷ್ಟೇ ಊರಿಗೆ ಮರಳಿದ್ದಾರೆ. ಉಳಿದವರು ಮೆಲ್ಕಾರ್ನಲ್ಲಿ ಪಾಸ್ ಪೋರ್ಟ್ ವ್ಯವಹಾರ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ವಿಮಾನ ಹೈಜಾಕ್ ಅಪರಾಧಿ ಮುಷ್ತಾಕ್ ಜರ್ಗಾರ್ ಆಸ್ತಿ ಮುಟ್ಟುಗೋಲು ಹಾಕಿದ ಎನ್ಐಎ
ಉಗ್ರನ ಆಸ್ತಿ ಮುಟ್ಟುಗೋಲು: ಪಾಕಿಸ್ತಾನದಲ್ಲಿ ಕುಳಿತು ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯ ನಡೆಸುವ ಉಗ್ರರ ವಿರುದ್ಧ ರಾಷ್ಟ್ರೀಯ ತನಿಖಾ ದಳ ಕಠಿಣ ಕ್ರಮ ಕೈಗೊಂಡಿದೆ. ಇದೇ ಮಾರ್ಚ್ 3ರಂದು ಪಾಕಿಸ್ತಾನದಲ್ಲಿರುವ ಉಗ್ರ ಮುಷ್ತಾಕ್ ಜರ್ಗಾರ್ ಅಲಿಯಾಸ್ ಲಾತ್ರಾಮ್ ಎಂಬಾತನ ಆಸ್ತಿಗಳನ್ನು ಎನ್ಐಎ ಮುಟ್ಟುಗೋಲು ಹಾಕಿಕೊಂಡಿದೆ. 1989ರಲ್ಲಿ ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣದಲ್ಲಿ ಕೂಡ ಜರ್ಗಾರ್ ಭಾಗಿಯಾಗಿದ್ದ. ಈತ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ 'ನಿಯೋಜಿತ ವೈಯಕ್ತಿಕ ಭಯೋತ್ಪಾದಕ' ಎಂದು ಘೋಷಿಸಲ್ಪಟ್ಟಿದ್ದ. ಈತ ಬಿಡುಗಡೆಯಾದಾಗಿನಿಂದ ಪಾಕಿಸ್ತಾನದಲ್ಲಿದ್ದುಕೊಂಡು ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಧನಸಹಾಯ ನೀಡುತ್ತಿದ್ದಾನೆ.