ಬಂಟ್ವಾಳ (ದಕ್ಷಿಣಕನ್ನಡ): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಂಚು ಪ್ರಕರಣ ಸಂಬಂಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಅಧಿಕಾರಿಗಳು ಇಂದು ದಾಳಿ ನಡೆಸಿದ್ದು, ವಿವಿಧ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ತಾಲೂಕಿನ ಮೆಲ್ಕಾರ್ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಮೂರು ಕಡೆಗಳಲ್ಲಿ ದಾಳಿ ನಡೆಸಿದ್ದು, ಮಹತ್ವದ ದಾಖಲೆಗಳಿಗಾಗಿ ಶೋಧಕಾರ್ಯ ನಡೆಸಿದ್ದಾರೆ.
ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಬೋಗೋಡಿಯ ವ್ಯಕ್ತಿಯೊಬ್ಬರ ಮನೆ ದಾಳಿ ನಡೆಸಿದ ಅಧಿಕಾರಿಗಳು, ಮಹತ್ವದ ದಾಖಲೆಗಳಿಗಾಗಿ ಶೋಧಿಸಿದ್ದಾರೆ. ಆರೋಪಿ ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದರು. ಇವರ ಮನೆಯಿಂದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಹಿಂದೆ ಪಿಎಫ್ಐ ಸಂಘಟನೆಯ ಫಂಡಿಂಗ್ ನೆಟ್ವರ್ಕ್ ಅನ್ನು ಎನ್ಐಎ ಬೇಧಿಸಿತ್ತು. ಬಂಧಿತರ ವಿಚಾರಣೆಯಲ್ಲಿ ಬಂಟ್ವಾಳದ ಹೆಸರು ಕೇಳಿಬಂದಿತ್ತು. ಪಿಎಫ್ಐ ಫಂಡಿಂಗ್ ನೆಟ್ವರ್ಕ್ಗೆ ಇವರಿಗೂ ಸಂಬಂಧ ಇದೆ ಎಂದು ಗೊತ್ತಾಗಿತ್ತು. ಹೀಗಾಗಿ, ಮನೆ ಮೇಲೆ ಎನ್ಐಎ ದಾಳಿ ನಡೆಸಿತ್ತು. ಮಂಗಳೂರು ನಗರದ ಹೊರವಲಯದಲ್ಲಿನ ವಳಚ್ಚಿಲ್ ನಿವಾಸಿ ಮುಸ್ತಾಕ್ ಎಂಬವರ ಮನೆ ಮೇಲೂ ಎನ್ಐಎ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಐದು ರಾಜ್ಯಗಳಲ್ಲಿ ಎನ್ಐಎ ಶೋಧ :ಎನ್ಐಎ ಇಂದು 5 ರಾಜ್ಯಗಳ ಒಟ್ಟು 14 ಸ್ಥಳಗಳಲ್ಲಿ ದಾಳಿ ನಡೆಸಿದೆ. ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಲ್ಲಿ ದಾಳಿ ನಡೆದಿದೆ. ಕಣ್ಣೂರು, ಮಲಪ್ಪುರಂ, ದಕ್ಷಿಣ ಕನ್ನಡ, ನಾಸಿಕ್, ಕೊಲ್ಲಾಪುರ, ಮುರ್ಷಿದಾಬಾದ್ ಮತ್ತು ಕತಿಹಾರ್ ಜಿಲ್ಲೆಗಳಲ್ಲಿ ಶೋಧ ನಡೆದಿದೆ. ಈ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.