ಸುಳ್ಯ (ದಕ್ಷಿಣಕನ್ನಡ):ಬೆಳ್ಳಾರೆಯ ಪ್ರವೀಣ್ ನೆಟ್ಟಾರ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಚೆನೈ ವಿಭಾಗದ ಇನ್ಸ್ಪೆಕ್ಟರ್ ಷಣ್ಮುಗಂ ನೇತೃತ್ವದ 3 ಮಂದಿ ಅಧಿಕಾರಿಗಳ ತಂಡ ಜಿಲ್ಲೆಯ ಹಲವು ಕಡೆಗಳಲ್ಲಿ ಮಂಗಳವಾರದಂದು ದಾಳಿ ನಡೆಸಿ ತೆರಳಿದ್ದಾರೆ.
ಮಂಗಳವಾರದಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡಂಗಡಿ ಗ್ರಾಮದ ಪೊಯ್ಯೆ ಗುಡ್ಡೆ ಎಂಬಲ್ಲಿನ ನೌಶಾದ್ ಎಂಬಾತನ ಮನೆಗೆ ದಾಳಿ ನಡೆಸಿದ್ದು ಈ ಸಂದರ್ಭದಲ್ಲಿ ನೌಶಾದ್ ಮನೆಯಲ್ಲಿ ಇರದೇ ಇದ್ದು ಬಳಿಕ ಎನ್ಐಎ ಅಧಿಕಾರಿಗಳು ಮಹಜರು ನಡೆಸಿ ತೆರಳಿರುತ್ತಾರೆ. ನೌಶಾದ್ ಈ ಹಿಂದೆ ಉಡುಪಿಯಲ್ಲಿ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಬಳಿಕ ಊರಿನಲ್ಲೇ ಲಾರಿ ಚಾಲಕ ವೃತ್ತಿ ಮಾಡಿಕೊಂಡಿದ್ದ.
ಈತ ಪಿಎಫ್‌ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದನು. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತಂಡ ಆತನನ್ನು ಹುಡುಕಾಟ ನಡೆಸಿದೆ. ಇದೀಗ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ನೌಶಾದ್ ಬಗ್ಗೆ ಮನೆಮಂದಿಯಲ್ಲಿ ವಿಚಾರಿಸಿ ಹೋಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಮಾತ್ರವಲ್ಲದೇ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೂ ಎನ್ಐಎ ಕಾರ್ಯಾಚರಣೆ ಮುಂದುವರಿಸಿದೆ.
ಸುಳ್ಯದ ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ ಬೆಳ್ಳಾರೆ, ಸುಳ್ಯ ಸೇರಿದಂತೆ ಕೊಡಗು ಜಿಲ್ಲೆಯಲ್ಲೂ ಎನ್ಐಎ ಶೋಧ ಕಾರ್ಯ ನಡೆಸಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಭಾವಚಿತ್ರವಿರುವ ವಾಂಟೆಡ್ ಪೊಸ್ಟರ್‌ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಅಧಿಕಾರಿಗಳು ಅಂಟಿಸಿದ್ದಾರೆ. ಆರೋಪಿಗಳ ಮನೆಯ ಗೋಡೆಯ ಮೇಲೂ ಪೊಸ್ಟರ್ ಅಂಟಿಸಲಾಗಿದೆ.