ಮಂಗಳೂರು:ನಗರದಲ್ಲಿ ಹೊಸ ವರ್ಷಾಚರಣೆ ಸಂಬಂಧ ಕೆಲವು ನಿಯಮಗಳನ್ನು ರೂಪಿಸಲಾಗಿದೆ. ಸಮುದ್ರ ತೀರ ಸೇರಿದಂತೆ ಹೊರಾಂಗಣದಲ್ಲಿ ನಡೆಯುವ ಸಂಭ್ರಮಾಚರಣೆಗೆ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ಇದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಮಾಹಿತಿ ನೀಡಿದ್ದಾರೆ.
ವರ್ಷಾಂತ್ಯದ ಆಚರಣೆ ಹಿನ್ನೆಲೆಯಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಬೀಚ್‌ನಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ಇರಲಿದೆ. ನೈತಿಕ ಪೊಲೀಸ್ಗಿರಿ ಸೇರಿದಂತೆ ಅಹಿತಕರ ಘಟನೆಗಳು ಕಂಡುಬಂದರೆ, ಪೊಲೀಸ್ ಸಂಪರ್ಕ ಸಂಖ್ಯೆಗಳನ್ನು ಬಳಸಿಕೊಳ್ಳಬೇಕು. ಹೊರಾಂಗಣ ಪಾರ್ಟಿ ನಡೆಯುವ ಸ್ಥಳ, ಅತಿ ಹೆಚ್ಚು ಜನಸಂದಣಿ ಸೇರುವ ಜಾಗಗಳಲ್ಲಿ ಪೊಲೀಸ್ ಅಧಿಕಾರಿಗಳ ಮೊಬೈಲ್ ಸಂಖ್ಯೆಗಳನ್ನೊಳಗೊಂಡ ಫ್ಲೆಕ್ಸ್ ಹಾಕಲಾಗುವುದು. 112ಕ್ಕೆ ಕರೆ ಮಾಡಿಯೂ ತಿಳಿಸಬಹುದು ಎಂದರು.
ಬೀಚ್‌ಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ನಿಗಾ ಮತ್ತು ಬೆಳಕಿನ ವ್ಯವಸ್ಥೆ ಸೇರಿದಂತೆ ಇತರ ಕ್ರಮ ಕೈಗೊಳ್ಳಲಾಗಿದೆ. ಮಂಗಳೂರಿನಲ್ಲಿ 36 ಕಡೆ ಒಳಾಂಗಣ ಹಾಗೂ ಬೀಚ್ ಸೇರಿದಂತೆ ಕೆಲವು ಹೊರಾಂಗಣದಲ್ಲೂ ಆಚರಣೆಗೆ ಅನುಮತಿ ಕೇಳಿದ್ದಾರೆ. ಆದರೆ ಒಳಾಂಗಣದಲ್ಲಿ ರಾತ್ರಿ 12.30ವರೆಗೆ ಹಾಗೂ ಹೊರಾಂಗಣದಲ್ಲಿ ರಾತ್ರಿ 10 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಹೇಳಿದರು.