ಕರ್ನಾಟಕ

karnataka

ಮಂಗಳೂರು ಪಾಲಿಕೆಗೆ ಜಯನಂದ ಅಂಚನ್ ಮೇಯರ್, ಪೂರ್ಣಿಮಾ ಉಪಮೇಯರ್

By

Published : Sep 9, 2022, 1:32 PM IST

Updated : Sep 9, 2022, 3:46 PM IST

ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಇಂದು ಪೂರ್ಣಗೊಂಡಿತು.

Mayor election
Mayor election

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕದ್ರಿ ಪದವು ವಾರ್ಡ್​ನ ಜಯನಂದ ಅಂಚನ್ ಮತ್ತು ಉಪಮೇಯರ್ ಆಗಿ ಸೆಂಟ್ರಲ್ ಮಾರ್ಕೆಟ್ ರೋಡ್ ವಾರ್ಡ್​ನ ಪೂರ್ಣಿಮಾ ಅವರು ಆಯ್ಕೆಯಾಗಿದ್ದಾರೆ. ಇಂದು ಪಾಲಿಕೆ ಸಭಾಂಗಣದಲ್ಲಿ ನಡೆದ ‌ಚುನಾವಣೆಯಲ್ಲಿ ಇವರ ಆಯ್ಕೆ ನಡೆಯಿತು. ಬಿಜೆಪಿ ಪಕ್ಷದ ಕಾರ್ಪೊರೇಟರ್ ಆಗಿರುವ ಜಯನಂದ ಅಂಚನ್ ಮತ್ತು ಪೂರ್ಣಿಮ ಬಹುಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.

ಪಾಲಿಕೆಯ 60 ಸ್ಥಾನಗಳಲ್ಲಿ 44 ಬಿಜೆಪಿ ಸ್ಥಾನ, 14 ಕಾಂಗ್ರೆಸ್ ಸ್ಥಾನ ಮತ್ತು 2 ಎಸ್​ಡಿಪಿಐ ಸ್ಥಾನಗಳನ್ನು ಹೊಂದಿದೆ. ಎಸ್​ಡಿಪಿಐನ ಸದಸ್ಯರು ಮತ ಚಲಾಯಿಸದೆ ತಟಸ್ಥರಾಗಿದ್ದರು. ಮಂಗಳೂರು ದಕ್ಷಿಣ ಶಾಸಕ ಬಿಜೆಪಿಯ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಶಾಸಕ ಬಿಜೆಪಿಯ ಡಾ.ವೈ.ಭರತ್ ಶೆಟ್ಟಿ ಮತದಾನದಲ್ಲಿ ಪಾಲ್ಗೊಂಡಿದ್ದರು.

ಜಯನಂದ ಅಂಚನ್ (ವಾರ್ಡ್ ನಂಬರ್ 22) ಅವರಿಗೆ ಎರಡು ಬಿಜೆಪಿ ಶಾಸಕರ ಮತ ಸೇರಿದಂತೆ 46 ಮತಗಳು ಲಭಿಸಿದರೆ, ಕಾಂಗ್ರೆಸ್ ಪಕ್ಷದಿಂದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಶಿಧರ್ ಹೆಗ್ಡೆ ಅವರಿಗೆ 14 ಮತಗಳು‌ ಲಭಿಸಿವೆ. ಚುನಾವಣೆಯಲ್ಲಿ ಬಹುಮತದಿಂದ ಜಯನಂದ ಅಂಚನ್ ಮೇಯರ್ ಆಗಿ ಆಯ್ಕೆಯಾದರು.

ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆ

ಉಪಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ‌ ಪೂರ್ಣಿಮಾ ಮತ್ತು ಕಾಂಗ್ರೆಸ್​ ಪಕ್ಷದಿಂದ ಝೀನತ್ ಸಂಶುದ್ದೀನ್ ಸ್ಪರ್ಧಿಸಿದ್ದರು. ಪೂರ್ಣಿಮಾ ಅವರಿಗೆ 46 ಮತಗಳು ಮತ್ತು ಝೀನತ್ ಸಂಶುದ್ದೀನ್ ಅವರು 14 ಮತಗಳನ್ನು ‌ಪಡೆದುಕೊಂಡರು. ಪೂರ್ಣಿಮಾ‌ ಮುಂದಿನ ಸಾಲಿನ ಉಪಮೇಯರ್ ಆಗಿ ಆಯ್ಕೆಯಾದರು. ಇದೇ ವೇಳೆ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ಆಯ್ಕೆ ಮಾಡಲಾಗಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ ಪ್ರಕಾಶ್ ಚುನಾವಣೆ ನಡೆಸಿದರು.

ಪಾಲಿಕೆಯ 23ನೇ ಅವಧಿಗೆ ಮೇಯರ್ ಆಗಿರುವ ಜಯನಂದ ಅಂಚನ್ ಮತ್ತು ಉಪಮೇಯರ್ ಆಗಿರುವ ಪೂರ್ಣಿಮಾಗೆ ಇನ್ನೊಂದು ವರ್ಷ ಅಧಿಕಾರಧಿ ಇದೆ. ನಿರ್ಗಮಿತ ಮೇಯರ್ ಆಗಿದ್ದ ಪ್ರೇಮಾನಂದ ಶೆಟ್ಟಿ ಮತ್ತು ಉಪಮೇಯರ್ ಸುಮಂಗಳ ಅವರು ಪಾಲಿಕೆಯ ಇತಿಹಾಸದಲ್ಲಿ ಸುದೀರ್ಘ ಅವಧಿಯ (1 ವರ್ಷ 6 ತಿಂಗಳು 6 ದಿನ) ಮೇಯರ್ ಮತ್ತು ಉಪಮೇಯರ್ ಆಗಿ ಅಧಿಕಾರ ನಡೆಸಿದ್ದರು. ಮೀಸಲಾತಿಯ ವಿಚಾರ ನ್ಯಾಯಾಲಯದಲ್ಲಿದ್ದ ಕಾರಣದಿಂದ ಹೊಸ ಮೇಯರ್ ಉಪಮೇಯರ್ ಚುನಾವಣೆ ವಿಳಂಬವಾಗಿತ್ತು. ಹಾಗಾಗಿ ನಿರ್ಗಮಿತ ಮೇಯರ್ ಮತ್ತು ಉಪಮೇಯರ್ ಅವರು ಸುಧೀರ್ಘ ಅವಧಿ ಅಧಿಕಾರ ನಡೆಸಿದ್ದಾರೆ.

ಇದನ್ನೂ ಓದಿ:ಕುಂಬಳಕಾಯಿ ಕಳ್ಳರು ಎಲ್ಲಾ ಕಡೆ ಇದ್ರೆ ನಾನೇನು ಮಾಡಲಿ?: ಸಂಸದೆ ಸುಮಲತಾ

Last Updated : Sep 9, 2022, 3:46 PM IST

ABOUT THE AUTHOR

...view details