ಸುಳ್ಯ/ಪುತ್ತೂರು(ದಕ್ಷಿಣ ಕನ್ನಡ):ಜಿಲ್ಲೆಯಲ್ಲಿ ಭಾರಿ ಮಳೆಯಿಂದ ಹಲವೆಡೆ ಅವಾಂತರಗಳು ಸಂಭವಿಸಿವೆ.ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಪ್ರವೇಶಕ್ಕೆ ಸಿದ್ಧಗೊಂಡಿದ್ದ ಹೊಸ ಮನೆಯೊಂದರ ಮೇಲೆ ಗುಡ್ಡ ಕುಸಿದು ನೆಲಸಮವಾಗಿರುವ ಘಟನೆ ನಡೆದಿದೆ.
ಮೂರು ದಿನಗಳ ಹಿಂದೆ ಮರ ಬಿದ್ದು ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು. ಗೋಡೆ ರಿಪೇರಿ ಕೆಲಸ ನಡೆದಿತ್ತು. ಜುಲೈ 18ರಂದು ನೂತನ ಗೃಹದ ಪ್ರವೇಶ ಕಾರ್ಯಕ್ರಮ ನೆರವೇರಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಷ್ಟರಲ್ಲೇ ಬುಧವಾರ ಗುಡ್ಡ ಕುಸಿದು ಮನೆ ನೆಲಸಮವಾಗಿದೆ.
ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಯ ಮನೆ ಇದಾಗಿದ್ದು, ಪ್ರಜ್ವಲ್ ಮತ್ತು ಉಜ್ವಲ್ ಎಂಬ ಸಹೋದರರು ಈ ಮನೆಯಲ್ಲಿದ್ದರು. ಬುಧವಾರ ಮನೆಯ ಹಾಲ್ನಲ್ಲಿ ಮಲಗಿದ್ದ ಇವರು ಬೆಳಗ್ಗೆ 6.30ಕ್ಕೆ ಹೊರ ಬಂದಿದ್ದರು. ಈ ಸಂದರ್ಭದಲ್ಲಿ ಗುಡ್ಡ ಕುಸಿದು 3 ಬೆಡ್ ರೂಂ ತುಂಬ ಮಣ್ಣು ಆವರಿಸಿಕೊಂಡಿದೆ. ಮನೆ ಬಳಿಯಿದ್ದ 3 ಬೈಕ್ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ ಎಂದು ತಿಳಿದುಬಂದಿದೆ.
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ:ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಸಂಟ್ಯಾರ್ ಸೇತುವೆ ಬಳಿ ನಡೆದಿದೆ. ಘಟನೆಯಲ್ಲಿ ಕಾರು ಭಾಗಶಃ ಜಖಂಗೊಂಡಿದೆ. ವಾಹನದಲ್ಲಿದ್ದ ಮಗುಸಹಿತ ಐವರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಉಪ್ಪಿನಂಗಡಿ ಆತೂರು ನಿವಾಸಿ ಆಸಿಫ್ ಎಂಬುವರು ಕುಂಬ್ರಕ್ಕೆ ಬಂದು ಮರಳಿ ಪುತ್ತೂರಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ.
ಇದನ್ನೂ ಓದಿ:ಕೇದಾರನಾಥದಿಂದ ವಾಪಸಾಗುತ್ತಿದ್ದಾಗ ಗಂಗಾ ನದಿಗೆ ಬಿದ್ದ ನಾಲ್ವರು ಪ್ರವಾಸಿಗರಿದ್ದ ಕಾರು