ಸುಳ್ಯ(ದಕ್ಷಿಣ ಕನ್ನಡ):ಇಲ್ಲಿನ ಕಟ್ಟ ಕಡೆಯ ಗ್ರಾಮ ಅಂದರೆ ಅದು ಬಾಳುಗೋಡು. ಈ ಪ್ರದೇಶದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಗಂಭೀರವಾಗಿದ್ದು, ಈ ಭಾಗದ 100ಕ್ಕೂ ಅಧಿಕ ವಿದ್ಯಾರ್ಥಿಗಳು ಇದೀಗ ಅನಿವಾರ್ಯವಾಗಿ ಗುಡ್ಡಕ್ಕೆ ತೆರಳಿ ಮರದ ಮೇಲೆ ಹತ್ತಿ ನೆಟ್ವರ್ಕ್ಗಾಗಿ ಸರ್ಕಸ್ ಮಾಡುವ ಪರಿಸ್ಥಿತಿ ಬಂದೊದಗಿದೆ.
ದೈನಂದಿನ ಸಂಪರ್ಕ ಹಾಗೂ ಅಂತರ್ಜಾಲ ವಿನಿಯೋಗಕ್ಕೆ ನೆಟ್ವರ್ಕ್ ಇಲ್ಲದಿರುವುದರಿಂದ ಈ ಹಿಂದಿನಿಂದಲೂ ಇಲ್ಲಿನ ನಿವಾಸಿಗಳು ಕಂಗಾಲಾಗಿದ್ದಾರೆ. ಇದೀಗ ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ಮೂಲಕ ಪಾಠ ಕಲಿಯಬೇಕಾದುದರಿಂದ ನೆಟ್‌ವರ್ಕ್‌ನ ಮೊರೆ ಹೋಗುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಈ ಪರಿಸರದ ವಿದ್ಯಾರ್ಥಿಗಳು ಗುಡ್ಡ ಹತ್ತಿ ನೆಟ್ವರ್ಕ್ಗಾಗಿ ತಡಕಾಡುವಂತಾಗಿದೆ.
ನೆಟ್‌ವರ್ಕ್ ಸಿಗದೆ ಮರ ಏರುವ ವಿದ್ಯಾರ್ಥಿಗಳು .. ಆನಲೈನ್ ಕ್ಲಾಸ್ಗಾಗಿ ಪರದಾಟ ಮಕ್ಕಳು ಬೆಟ್ಟುಮಕ್ಕಿ ಎಂಬಲ್ಲಿನ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳು ದಟ್ಟ ಕಾಡಿನೊಳಗೆ ಪ್ರವೇಶಿಸಿ ಮರ ಏರುತ್ತಿದ್ದಾರೆ. ಗಂಡು ಮಕ್ಕಳ ಜೊತೆ ಹೆಣ್ಣು ಮಕ್ಕಳು ಕೂಡ ಮರ ಹತ್ತುವ ಪ್ರಸಂಗ ಇಲ್ಲಿ ಎದುರಾಗಿದೆ. ಹಲವು ವರ್ಷಗಳ ಹಿಂದೆಯೇ ನೆಟ್ವರ್ಕ್ ಸಮಸ್ಯೆಯನ್ನು ವಿವರಿಸಿ ಪ್ರಧಾನಿಗೆ ಇಲ್ಲಿಂದ ಮನವಿ ಪತ್ರವನ್ನು ಕಳುಹಿಸಲಾಗಿತ್ತು. ಸಮಸ್ಯೆ ಬಗೆಹರಿಸುವ ಭರವಸೆಯೂ ಲಭಿಸಿತ್ತು. ಆದರೆ ಬಳಿಕ ಯಾವ ಕ್ರಮವೂ ಆಗಿಲ್ಲ. ಹಾಗಾಗಿ ಸ್ಥಳೀಯರು ಸಂಸದರು ಹಾಗೂ ಸುಳ್ಯ ಶಾಸಕರ ಸಹಿತ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರು. ಆದರೂ ಫಲಿತಾಂಶ ಮಾತ್ರ ಶೂನ್ಯವಾಗಿದೆ.
ಆಧುನಿಕ ತಂತ್ರಜ್ಞಾನ ಯುಗದಲ್ಲಿ ಇಲ್ಲಿನ ಮಕ್ಕಳು ನೆಟ್‌ವರ್ಕ್ ಸಿಗದೇ ವಿದ್ಯಾಭ್ಯಾಸದಿಂದ ಹಿಂದೆ ಬೀಳುವ ಸಾಧ್ಯತೆ ಇದೆ. ಮಾತ್ರವಲ್ಲದೆ ಕಾಡಾನೆ ಸೇರಿದಂತೆ ವನ್ಯ ಮೃಗಗಳಿರುವ ಕಾಡು ಇದಾಗಿದ್ದು, ಈ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲೇ ಕಾಡಾನೆಗಳು ಓಡಾಡುತ್ತಿರುತ್ತವೆ. ಬಾಳುಗೋಡು ಪುಷ್ಪಗಿರಿ ತಪ್ಪಲಿನ ಗ್ರಾಮ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಕಾಡಾನೆಗಳಿರುತ್ತವೆ. ಚಿರತೆ ಹಾವಳಿಯೂ ಇದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಕಾಡು ಪ್ರಾಣಿಗಳ ದಾಳಿಗೂ ಒಳಗಾಗುವ ಭೀತಿ ಇಲ್ಲಿನ ಹಿರಿಯರನ್ನು ಕಾಡುತ್ತಿದೆ.