ಮಂಗಳೂರು:ಕೊರೊನಾ ಸೋಂಕಿತರು ಮೃತಪಟ್ಟರೆ ಉಚಿತ ಆ್ಯಂಬುಲೆನ್ಸ್ ವ್ಯವಸ್ಥೆ ಇದೆಯಾದರೂ ಕೋವಿಡೇತರ ರೋಗಿಗಳು ಮೃತಪಟ್ಟರೆ ಈ ಸೇವೆ ಸಿಗುವುದಿಲ್ಲ.ಹೀಗಾಗಿ ಬಡವರು ಅಂತ್ಯ ಸಂಸ್ಕಾರಕ್ಕೆ ಮೃತದೇಹ ಸಾಗಿಸಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆ ನಿರೀಕ್ಷಿಸಲಾಗುತ್ತಿದೆ.
ಏಳೆಂಟು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್ ಅವರ ತಂದೆ, ಮಾಜಿ ಶಾಸಕ ಯು.ಟಿ.ಫರೀದ್ ಅವರ ಸ್ಮರಣಾರ್ಥ ಶ್ರದ್ಧಾಂಜಲಿ ಎಂಬ ಆ್ಯಂಬುಲೆನ್ಸ್ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದ್ದರು. ಆದರಿದು ನಾಲ್ಕೈದು ವರ್ಷಗಳಿಂದ ನಿರ್ವಹಣೆಯಿಲ್ಲದೆ ಮೂಲೆ ಸೇರಿದೆ.
ಇದನ್ನೂ ಓದಿ...ಉಚಿತ ಆಂಬುಲೆನ್ಸ್ ಸೇವೆ: ಆಪತ್ ಕಾಲದಲ್ಲಿ ಆದರು ಆಪತ್ಬಾಂಧವರು!
ಮಂಗಳೂರಿನ ಕೆಲವು ಮಸೀದಿಗಳಲ್ಲಿ ಆಯಾ ಮಸೀದಿ ವ್ಯಾಪ್ತಿಯ ಸಮುದಾಯದವರಿಗೆ ಅನುಕೂಲವಾಗಲು ಆ್ಯಂಬುಲೆನ್ಸ್ ಸೇವೆ ಇದೆ. ಆದರೆ ಜಿಲ್ಲೆಯ ಸಾರ್ವಜನಿಕರಿಗೆಂದೇ ಆ್ಯಂಬುಲೆನ್ಸ್ ಸೇವೆ ಇಲ್ಲದಿರುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಉಚಿತ ಆ್ಯಂಬುಲೆನ್ಸ್ ಸೇವೆಯ ನಿರೀಕ್ಷೆಯನ್ನು ಜನರು ಇಟ್ಟುಕೊಂಡಿದ್ದಾರೆ.
ಉಚಿತ ಆ್ಯಂಬುಲೆನ್ಸ್ ಸೇವೆ ಇಲ್ಲದ ಕಾರಣ ಖಾಸಗಿ ಆ್ಯಂಬುಲೆನ್ಸ್ಗೆ ಹಣ ಹೊಂದಿಸುವುದು ಕೂಡ ಸವಾಲಾಗಿದೆ. ಇದರಿಂದ ಬಡವರು ಸಾಲಸೋಲ ಮಾಡಿ ಶವ ಸಾಗಿಸುವ ಪರಿಸ್ಥತಿ ಬಂದಿದೆ. ಇನ್ನೂ ಕೆಲವರು ದುಡ್ಡು ಹೊಂದಿಸಲಾಗದೆ ನಾನಾ ಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಗಮನ ಹರಿಸಬೇಕಿದೆ.